Mysore
33
few clouds

Social Media

ಭಾನುವಾರ, 22 ಮಾರ್ಚ್ 2026
Light
Dark

ಇರಾನ್‌ ಅಧ್ಯಕ್ಷರ ಜತೆ ಪ್ರಧಾನಿ ಮೋದಿ ಮಾತುಕತೆ

ಹೊಸದಿಲ್ಲಿ : ಇರಾನ್‌ ಮತ್ತು ಇಸ್ರೇಲ್‌ ನಡುವಿನ ಸಮರ ಮತ್ತಷ್ಟು ತೀವ್ರಗೊಂಡಿದೆ. ಈ ನಡುವೆ ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯನ್‌ ಜತೆ ದೂರವಾಣಿ ಮೂಲಕ ಮಾತನಾಡಿ, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ದಾರೆ.

ಇರಾನ್‌ ಅಧ್ಯಕ್ಷ ಡಾ. ಮಸೂದ್ ಪೆಜೆಶ್ಕಿಯನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಈದ್ ಮತ್ತು ನೌರುಜ್ ಶುಭಾಶಯಗಳನ್ನು ತಿಳಿಸಿದ್ದೇನೆ. ಈ ಹಬ್ಬದ ಋತುವು ಪಶ್ಚಿಮ ಏಷ್ಯಾಕ್ಕೆ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿ ತರಲಿದೆ ಎಂದು ನಾವು ಆಶಿಸುತ್ತೇವೆ” ಎಂಬುದಾಗಿ ಮೋದಿ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇರಾನ್‌ನ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಇತ್ತೀಚೆಗೆ ನಡೆದ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಮೋದಿ, ಪ್ರಾದೇಶಿಕ ಸ್ಥಿರತೆಗೆ ಬೆದರಿಕೆ ಒಡ್ಡುವ ಮತ್ತು ಜಾಗತಿಕ ಪೂರೈಕೆ ಸರಪಳಿಗೆ ಅಡ್ಡಿಪಡಿಸುವ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ಖಂಡಿಸುತ್ತೇನೆ ಎಂದು ಹೇಳಿದರು.

ಜಾಗತಿಕ ವ್ಯಾಪಾರದ ಅಡೆತಡೆಯಿಲ್ಲದ ಚಲನೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಸಂಚಾರ ಸ್ವಾತಂತ್ರ್ಯವನ್ನು ರಕ್ಷಿಸುವ ಮತ್ತು ಹಡಗು ಮಾರ್ಗಗಳು ಮುಕ್ತ ಮತ್ತು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವ ಮಹತ್ವವನ್ನು ಅವರು ಪುನರುಚ್ಚರಿಸಿದರು. ಇರಾನ್‌ನಲ್ಲಿರುವ ಭಾರತೀಯರ ಸುರಕ್ಷತೆಗೆ ಕ್ರಮ ಕೈಗೊಂಡಿರುವ ಅಲ್ಲಿನ ಸರ್ಕಾರದ ಕ್ರಮವನ್ನು ಮೋದಿ ಶ್ಲಾಘಿಸಿದರು. ಫೆಬ್ರವರಿ 28ರಂದು ಯುದ್ಧ ಆರಂಭವಾದ ಬಳಿಕ ನರೇಂದ್ರ ಮೋದಿ ಮತ್ತು ಡಾ. ಮಸೂದ್ ಪೆಜೆಶ್ಕಿಯನ್ ಮಾತನಾಡುತ್ತಿರುವುದು ಇದು 2ನೇ ಬಾರಿ.

ಈ ತಿಂಗಳ ಆರಂಭದಲ್ಲಿ ಈ ಇಬ್ಬರು ನಾಯಕರು ಮಾತುಕತೆ ನಡೆಸಿದ್ದರು. ಈ ವೇಳೆ ಪಶ್ಚಿಮ ಏಷ್ಯಾದಲ್ಲಿನ ಗಂಭೀರ ಪರಿಸ್ಥಿತಿ ಕುರಿತು ಚರ್ಚಿಸಿದ್ದಾಗಿ ಮೋದಿ ಹೇಳಿದ್ದರು. ಉದ್ವಿಗ್ನ ಪರಿಸ್ಥಿತಿ, ನಾಗರಿಕರ ಜೀವಹಾನಿ ಹಾಗೂ ಮೂಲಸೌಕರ್ಯಕ್ಕೆ ಹಾನಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಜತೆಗೆ ಭಾರತೀಯ ಸುರಕ್ಷತೆ ಬಗ್ಗೆಯೂ ಮೋದಿ ಧ್ವನಿಗೂಡಿಸಿದ್ದರು.

Tags:
error: Content is protected !!