ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿಯ ಗೃಹ ಸಚಿವರಾಗಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ದೆಹಲಿಯಲ್ಲಿ ಇಂದು ನಡೆದ ಎನ್‌ಡಿಎ ಮೈತ್ರಿಕೂಟ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಅಮಿತ್ ಶಾ ಅವರು ಇದುವರೆಗೆ ಅತೀ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಕೇಂದ್ರ ಗೃಹ ಸಚಿವರಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮೇ.30, 2019ರಂದು ಅಧಿಕಾರ ವಹಿಸಿಕೊಂಡಾಗಿನಿಂದ 2258 ದಿನಗಳನ್ನು ಪೂರೈಸಿದ್ದಾರೆ. ಇದರೊಂದಿಗೆ ಮಾರ್ಚ್.19, 1998ರಿಂದ ಮೇ.22, 2004ರವರೆಗೆ 2256 ದಿನಗಳ ಕಾಲ ಈ ಹುದ್ದೆಯನ್ನು ಅಲಂಕರಿಸಿದ್ದ ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ಅಧಿಕಾರಾವಧಿಯನ್ನು ಅಮಿತ್ ಶಾ ಮೀರಿಸಿದ್ದಾರೆ.
ಅಮಿತ್ ಶಾ ಮೊದಲು ಮೇ.30, 2019ರಂದು ಕೇಂದ್ರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಜೂನ್.9, 2024ರವರೆಗೆ ಆ ಹುದ್ದೆಯಲ್ಲಿ ಮುಂದುವರೆದರು. ಹೊಸ ಸರ್ಕಾರ ರಚನೆಯಾದ ನಂತರ ಜೂನ್.10, 2024ರಂದು ಮತ್ತೆ ಅಧಿಕಾರ ವಹಿಸಿಕೊಂಡರು. ಗೃಹ ಸಚಿವಾಲಯದ ಜೊತೆಗೆ ಅವರು ಕೇಂದ್ರ ಸಹಕಾರ ಸಚಿವರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.





