Mysore
28
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಅಮಿತ್‌ ಶಾ ಹೇಳಿಕೆ ಸಮರ್ಥಿಸಿಕೊಂಡ ಪ್ರಧಾನಿ ಮೋದಿ

ನವದೆಹಲಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ಅಮಾನಿಸಿದ್ದಾರೆ ಎಂಬ ಕಾಂಗ್ರೆಸ್‌ ಆರೋಪವನ್ನು ತಳ್ಳಿ ಹಾಕಿ ಕೇಂದ್ರ ಸಚಿವ ಅಮಿತ್‌ ಶಾ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಕಾಂಗ್ರೆಸ್‌ ಪಕ್ಷ ಬಹಳ
ಹಿಂದಿನಿಂದಲೂ ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ಸದಾ ಅವಮಾನಿಸಿದ್ದರು ಎಂಬುದರ ಇತಿಹಾಸವನ್ನು ಬಹಿರಂಗಪಡಿಸಿದ್ದಾರೆ. ಅಮಿತ್‌ ಶಾ ಹೇಳಿದ ಸತ್ಯಗಳಿಂದ ಕಾಂಗ್ರೆಸ್‌ನವರು ಸ್ಪಷ್ಟವಾಗಿ ದಿಗ್ಭ್ರಮೆಗೊಂಡಿದ್ದಾರೆ. ಹೀಗಾಗಿ ಅವರು ಈ ನಾಟಕ ಮಾಡುತ್ತಿದ್ದಾರೆ. ಜನರಿಗೆ ಸತ್ಯ ತಿಳಿದಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷ ಕೊಳೆತು ನಾರುವ ಪರಿಸರ ವ್ಯವಸ್ಥೆಯನ್ನು ಹಾಗೂ ದುರುದ್ದೇಶಪೂರಿತ ಸುಳ್ಳುಗಳು ತಮ್ಮ ಹಲವಾರು ವರ್ಷಗಳ ದುಷ್ಕೃತ್ಯಗಳನ್ನು ಮರೆಮಾಚಬಹುದು ಎಂದುಕೊಂಡಿದ್ದರೆ ಅದು ತಪ್ಪು. ಅದರಲ್ಲೂ ಬಾಬಾ ಸಾಹೇಬರಿಗೆ ಕಾಂಗ್ರೆಸ್‌ ಅವರು ಮಾಡಿದ ಅವಮಾನಗಳನ್ನು ಅವರು ಮರೆಮಾಚಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ನೆಹರು ಮತ್ತು ಗಾಂಧಿ ಕುಟುಂಬವನ್ನು ಉಲ್ಲೇಖಿಸಿ, ಒಂದು ರಾಜವಂಶದ ನೇತೃತ್ವದ ಪಕ್ಷವು ಅಂಬೇಡ್ಕರ್‌ ಅವರ ಪರಂಪರೆಯನ್ನು ಅಳಿಸಿಹಾಕಲು ಹಾಗೂ ಎಸ್‌ಸಿ/ಎಸ್‌ಟಿ ಸಮುದಾಯಗಳನ್ನು ಅವಮಾನಿಸಲು ಸಾಧ್ಯವಿರುವ ಎಲ್ಲ ಕೊಳಕು ತಂತ್ರಗಳಲ್ಲಿ ಹೇಗೆಡ ತೊಡಗಿದೆ ಎಂಬುದನ್ನು ಜನರು ಪದೇ ಪದೇ ನೋಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಅಂಬೇಡ್ಕರ್‌ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿದ್ದು ಸೇರಿದಂತೆ ಕಾಂಗ್ರೆಸ್‌ ಮಾಡಿದ ಪಾಪಗಳ ಪಟ್ಟಿ ದೊಡ್ಡದಿದೆ ಎಂದಿದ್ದಾರೆ. ದೇಶದ ಮೊದಲ ಪ್ರಧಾನಿ ಅಂಬೇಡ್ಕರ್‌ ವಿರುದ್ಧ ಪ್ರಚಾರ ಮಾಡಿ ಬಾಬಾ ಸಾಹೇಬರನ್ನು ಸೋಲಿಸಿದ್ದರು. ಅಲ್ಲದೇ ಅಂಬೇಡ್ಕರ್‌ ಅವರಿಗೆ ನೀಡಬೇಕಿದ್ದ ಭಾರತರತ್ನವನ್ನು ನಿರಾಕರಿಸಲಾಯಿತು. ಸಂಸತ್ತಿನ ಸೆಂಟ್ರಲ್‌ ಸಭಾಂಗಣದಲ್ಲಿ ಅವರ ಭಾವಚಿತ್ರ ಹಾಕಲು ಬಿಡಲಿಲ್ಲ ಎಂದು ಕಿಡಿಕಾರಿದ್ದಾರೆ.

 

Tags: