ಅಹಮದಾಬಾದ್: ದೇಶದ ವಿಮಾನಯಾನ ಇತಿಹಾಸದಲ್ಲೇ ಅತೀ ದೊಡ್ಡ ದುರಂತ ಎಂದೇ ಹೇಳಲಾಗಿರುವ ಗುಜರಾತ್‌ನ ಸರ್ದಾರ್ ವಲ್ಲಬಭಾಯಿ ಪಟೇಲ್ ಅಂತರರಾಷ್ಟ್ರೀಯ ನಿಲ್ದಾಣದಲ್ಲಿ ಉಂಟಾದ ಏರ್ ಇಂಡಿಯಾ ವಿಮಾನ ಆಪಘಾತದಲ್ಲಿ ಸಾವನ್ನಪ್ಪಿರುವ ಪ್ರಯಾಣಿಕರ ಸಂಖ್ಯೆ 265ಕ್ಕೆ ಏರಿಕೆಯಾಗಿದೆ.
ಘಟನೆಯಲ್ಲಿ ಒಬ್ಬ ವ್ಯಕ್ತಿ ಮಾತ್ರ ಜೀವಂತವಾಗಿ ಪಾರಾಗಿದ್ದು, ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಮಾನದಲ್ಲಿದ್ದ 230 ಪ್ರಯಾಣಿಕರಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸರು ಮತ್ತು ಒಬ್ಬ ಕೆನಡಾದವರು ಮತ್ತು 12 ಸಿಬ್ಬಂದಿ ಇದ್ದರು.
ಸಾವನ್ನಪ್ಪಿದವರಲ್ಲಿ ಗುಜರಾತ್‍ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಇದ್ದರು. 1.25 ಲಕ್ಷ ಲೀಟರ್‌ಗಳಿಗೂ ಹೆಚ್ಚು ಜೆಟ್ ಇಂಧನ ಸ್ಫೋಟಗೊಂಡ ಕಾರಣ, ಅಪಘಾತದ ಸ್ಥಳದಲ್ಲಿ ತಾಪಮಾನ 1,000 ಡಿಗ್ರಿ ಸೆಲ್ಸಿಯಸ್ ತಲುಪಿದೆ ಎಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ. ಬೆಂಕಿಯ ತೀವ್ರತೆಯಿಂದಾಗಿ “ಯಾರನ್ನೂ ಉಳಿಸುವುದು ಅಸಾಧ್ಯ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಏರ್ ಇಂಡಿಯಾದ ಪೋಷಕ ಕಂಪನಿ ಟಾಟಾ ಗ್ರೂಪ್, ಮೃತರ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ, ಗಾಯಾಳುಗಳಿಗೆ ಸಂಪೂರ್ಣ ವೈದ್ಯಕೀಯ ವೆಚ್ಚದ ವ್ಯಾಪ್ತಿ ಮತ್ತು ಹಾನಿಗೊಳಗಾದ ವೈದ್ಯಕೀಯ ಕಾಲೇಜು ಮೂಲಸೌಕರ್ಯವನ್ನು ಪುನರ್ ನಿರ್ಮಿಸಲು ಸಹಾಯವನ್ನು ಘೋಷಿಸಿದೆ.





