ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದಲ್ಲಿ 40 ವರ್ಷದ ಬ್ರಿಟಿಷ್ ಪ್ರಜೆ ರಮೇಶ್ ವಿಶ್ವಾಸ್ ಕುಮಾರ್ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ವಿಮಾನದಿಂದ ಹಾರಿ ಜೀವ ಉಳಿಸಿಕೊಂಡ ವಿಶ್ವಾಸ್ ರಮೇಶ್ ಕುಮಾರ್ ಅವರು ಸೀಟ್ ಬೆಲ್ಟ್ ತೆಗೆದು ಎಮರ್ಜೆನ್ಸಿ ಬಾಗಿಲಿನಿಂದ ಜಿಗಿದೆ ಎಂದು ವಿವರಣೆ ನೀಡಿದ್ದಾರೆ.
ಅಹಮದಾಬಾದ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಮಾಧ್ಯಮಗಳೊಂದಿಗೆ ಘಟನೆಯಿಂದ ಪಾರಾದ ಬಗ್ಗೆ ಮಾಹಿತಿ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಬಳಿಯೂ ಘಟನೆಯಿಂದ ಪಾರಾದ ಬಗ್ಗೆ ಮಾಹಿತಿ ನೀಡಿದ ವಿಶ್ವಾಸ್ ರಮೇಶ್ ಕುಮಾರ್ ಅವರು, ಬಳಿಕ ಮಾಧ್ಯಮಗಳೊಂದಿಗೆ ವಿವರಣೆ ನೀಡಿದ್ದಾರೆ.
ವಿಮಾನ ಟೇಕಾಫ್ ಆಗುತ್ತಿದ್ದಂತೆ ಏನೋ ಸಮಸ್ಯೆ ಆಗಿದೆ ಎಂದು ಗೊತ್ತಾಯಿತು. ವಿಮಾನದ ಒಳಗೆ ಹಸಿರು, ಬಿಳಿ ಬಣ್ಣದ ಲೈಟ್ ಆನ್ ಆಯ್ತು. ಕೆಲವೇ ಸೆಕೆಂಡ್‌ನಲ್ಲಿ ವಿಮಾನ ಕಟ್ಟಡಕ್ಕೆ ಡಿಕ್ಕಿಯಾಯ್ತು. ಈ ವೇಳೆ ನಾನು ಸೀಟ್ ಬೆಲ್ಟ್ ತೆಗೆದು ಎಮರ್ಜೆನ್ಸಿ ಬಾಗಿಲಿನ ಮೂಲಕ ನೆಲೆದ ಮೇಲೆ ಜಂಪ್ ಮಾಡಿದೆ.
ನಾನು ಹೇಗೆ ಬದುಕಿ ಬಂದೇ ಎಂಬುದೇ ನನಗೆ ಆಶ್ಚರ್ಯ. ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಾಗ ನನ್ನ ಎಡಗೈ ಕೂಡ ಸುಡಲು ಆರಂಭಿಸಿತು. ಆಗ ನಾನು ಅಲ್ಲಿಂದ ಓಡಿ ಬಂದೆ. ಆಗ ಯಾರೋ ನನ್ನನ್ನು ಎಳೆದು ಆಂಬುಲೆನ್ಸ್‌ನಲ್ಲಿ ಕೂರಿಸಿದರು ಎಂದು ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ.





