ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಗಸ್ತು ವೇಳೆ ಮೃತಪಟ್ಟ ಯೋಧರೊಬ್ಬರ ಪತ್ನಿಗೆ ಪಿಂಚಣಿ ನೀಡುವಂತೆ ಸಶಸ್ತ್ರ ಪಡೆಗಳ ನ್ಯಾಯಮಂಡಳಿ ನೀಡಿದ್ದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಕೇಂದ್ರ ಸರ್ಕಾರಕ್ಕೆ 50 ಸಾವಿರ ರೂಪಾಯಿಗಳ ದಂಡ ವಿಧಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಈ ಕುರಿತು ಇಂದು(ಡಿ.3) ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕ ಹಾಗೂ ಆಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ದ್ವಿಸದಸ್ಯ ಪೀಠವೂ ವಿಚಾರಣೆಯನ್ನು ನಡೆಸಿ, ಬಳಿಕ ಕೇಂದ್ರ ಸರ್ಕಾರಕ್ಕೆ 50 ಸಾವಿರ ರೂ. ದಂಡ ವಿಧಿಸುವಂತೆ ತೀರ್ಪು ಪ್ರಕಟಿಸಿದೆ.
2013ರ ಜನವರಿ ತಿಂಗಳಿನಲ್ಲಿ ಯೋಧ ನಾಯ್ಕ್ ಇಂದರ್‌ಜೀತ್ ಸಿಂಗ್ ಎಂಬುವವರು ಗಸ್ತು ನಡೆಸುತ್ತಿದ್ದ ವೇಳೆ ತೀವ್ರ ವಿಷಮ ಹವಾಮಾನ ಪರಿಸ್ಥಿತಿಯಲ್ಲಿ ಸಿಲುಕಿ ಹೃದಯ ಸ್ತಂಭನದಿಂದಾಗಿ ಮೃತಪಟ್ಟಿದ್ದರು.
ಸುಪ್ರೀಂಕೋರ್ಟ್ ಆದೇಶವೇನು?
ಮೃತ ಯೋಧನ ಪತ್ನಿ ಪಿಂಚಣಿ ಕುರಿತು ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠವೂ ನಿರ್ಧಾರ ಕೈಗೊಳ್ಳುವ ಅಧಿಕಾರಿಗಳು ಕರ್ತವ್ಯದ ಸಂದರ್ಭದಲ್ಲಿ ಮೃತಪಟ್ಟ ಯೋಧನ ಪತ್ನಿಯ ವಿಚಾರದಲ್ಲಿ ಸಹಾನುಭೂತಿ ಹೊಂದಿರಬೇಕಿತ್ತು. ಈ ಕಾರಣವಾಗಿ ನಮ್ಮ ಪೀಠವೂ ಕೇಂದ್ರ ಸರ್ಕಾರಕ್ಕೆ 50 ಸಾವಿರ ದಂಡ ವಿಧಿಸುತ್ತಿದೆ. ಹೀಗಾಗಿ ಈ ಮೊತ್ತವನ್ನು ಇನ್ನೆರಡು ತಿಂಗಳುಗಳಲ್ಲಿ ಯೋಧನ ಪತ್ನಿಗೆ ಪಾವತಿಸಬೇಕು ಎಂದು ಆದೇಶಿಸಿದೆ.