ಇಸ್ಲಾಮಾಬಾದ್ : ಪಾಕಿಸ್ತಾನದ ಬಲೂಚ್ ಲಿಬರೇಷನ್ ಆರ್ಮಿಯ (ಬಿಎಲ್‌ಎ) ಉಗ್ರರು ಬಲೂಚಿಸ್ತಾನದ ರೈಲನ್ನು ಮಂಗಳವಾರ ಹೈಜಾಕ್ ಮಾಡಿದ್ದಾರೆ.
ರೈಲಿನಲ್ಲಿ ನೂರಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಅವರುಗಳನ್ನೆಲ್ಲಾ ಒತ್ತೆಯಾಳುಗಳಾಗಿ ಇರಿಸಿಕೊಳ್ಳಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಜಾಫರ್ ರೈಲು ಕ್ವೆಟ್ವಾದಿಂದ ಪೇಶಾವರ್‌ಗೆ ತೆರಳುತ್ತಿತ್ತು. ಆವಾಗ, ಬಿಎಲ್‌ಎ ಉಗ್ರರು ದಾರಿ ಮಧ್ಯೆ ರೈಲನ್ನು ಹೈಜಾಕ್ ಮಾಡಿದ್ದಾರೆ. 9 ಬೋಗಿಗಳಿರುವ ಈ ರೈಲು ಅಲ್ಲಿನ ಸ್ಥಳೀಯ ರೈಲಾಗಿದೆ.
ಹೈಜಾಕ್ ಮಾಹಿತಿ ಅರಿತ ಪಾಕಿಸ್ತಾನ ಸರ್ಕಾರ ಸೇನೆ ಕಳುಹಿಸಿದೆ. ಬಳಿಕ ಅಲ್ಲಿ ಗುಂಡಿನ ಚಕಮಕಿ ನಡೆದು, ಸೇನೆಯ 6 ಸಿಬ್ಬಂದಿ ಮೃತಪಟ್ಟಿದ್ದಾರೆ. ಜೊತೆಗೆ ಹಲವು ಪ್ರಯಾಣಿಕರು ಕೂಡ ಗಾಯಗೊಂಡಿದ್ದಾರೆ ಎಂದು ವರದಿ ಮಾಡಿವೆ.
ಈ ಮಧ್ಯೆ ಹೇಳಿಕೆ ಬಿಡುಗಡೆ ಮಾಡಿರುವ ಬಿಎಲ್‌ಎ ಉಗ್ರ ಸಂಘಟನೆ, ರೈಲು ಹೈಜಾಕ್ ಮಾಡಿರುವುದು ನಿಜ. ಪಾಕಿಸ್ತಾನ ಸೇನೆಯು ಕಾರ್ಯಚರಣೆ ನಡೆಸಿದರೆ ಪ್ರಯಾಣಿಕರನ್ನು ಕೊಲ್ಲಲಾಗುವುದು ಎಂದು ಹೇಳಿರುವುದಾಗಿ ಅಲ್ಲಿನ ಮಾಧ್ಯಮಗಳು ತಿಳಿಸಿವೆ.
ಹೈಜಾಕ್‌ಗೆ ಇದೇ ಕಾರಣ?
ಬಿಎಲ್‌ಎ ಉಗ್ರ ಸಂಘಟನೆಯು ಪಾಕಿಸ್ತಾನದಿಂದ ಬಲೂಚಿಸ್ತಾನ ಪ್ರಾಂತ್ಯವನ್ನು ಪ್ರತ್ಯೇಕ ದೇಶವನ್ನಾಗಿ ಮಾಡಲು ಹೋರಾಟ ನಡೆಸುತ್ತ ಬಂದಿದೆ. ಹೀಗಾಗಿ, ಸಂಘಟನೆಯು ರೈಲನ್ನು ಹೈಜಾಕ್ ಮಾಡಿ ತನ್ನ ಡಿಮೆಂಡ್ ಅನ್ನು ಪ್ರತಿಪಾದಿಸಿದೆ. ಈ ಹಿಂದೆ ಕೂಡ ಇದೇ ಸಂಘಟನೆ ಅನೇಕ ಸ್ಫೋಟಗಳಲ್ಲಿ ಭಾಗಿಯಾಗಿ, ನೂರಾರು ಮಂದಿಯನ್ನು ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ.





