ನವದೆಹಲಿ: ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಇದೇ ಡಿಸೆಂಬರ್.16ರಂದು ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ ನಂತರ ಚರ್ಚೆ ಮಾಡಲು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.
ಅರ್ಜುನ್ ರಾಮ್ ಮೇಘವಾಲ್ ಅವರು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ ಮಸೂದೆ, 2024ನ್ನು ಸಹ ಮಂಡಿಸಲಿದ್ದಾರೆ. ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ ಕಾಯಿದೆ 1963, ದೆಹಲಿ ಸರ್ಕಾರದ ರಾಷ್ಟ್ರೀಯ ರಾಜಧಾನಿ ಪ್ರದೇಶ ಕಾಯ್ದೆ, 1991 ಮತ್ತು ಜಮ್ಮುಗೆ ತಿದ್ದುಪಡಿ ಮಾಡಲು ಮತ್ತಷ್ಟು ಮಸೂದೆಯನ್ನು ಪರಿಚಯಿಸಲು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ, 2019 ಮಸೂದೆಯನ್ನು ಮಂಡನೆ ಮಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಇತ್ತೀಚೆಗೆ ಮಸೂದೆಗೆ ಒಪ್ಪಿಗೆ ನೀಡಿತ್ತು. ಒಪ್ಪಿಗೆ ಬೆನ್ನಲ್ಲೇ ಈಗ ಬಿಲ್ ಮಂಡಿಸಲು ತಯಾರಿ ನಡೆಸಲಾಗುತ್ತಿದೆ. ಇದಕ್ಕೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು, ಸದನದಲ್ಲಿ ಕೋಲಾಹಲ ನಡೆಯುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿವೆ.
ಇನ್ನು ನರೇಂದ್ರ ಮೋದಿ ಸರ್ಕಾರದ ಮಹತ್ವದ ನಿರ್ಣಯಗಳಲ್ಲಿ ಒಂದಾದ ಒಂದು ದೇಶ, ಒಂದು ಚುನಾವಣೆ ಪ್ರಸ್ತಾವನೆಗೆ ಮೋದಿ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಒಂದೇ ಬಾರಿ ನಡೆಸುವಂತೆ ಮಹತ್ವದ ಯೋಜನೆ ಇದಾಗಿದ್ದು, ವಿರೋಧಗಳ ನಡುವೆಯೇ ಸಚಿವ ಸಂಪುಟ ಅನುಮೋದನೆ ಕೊಟ್ಟಿದೆ.
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಪ್ರಸ್ತಾವನೆಯನ್ನು ಅನುಮೋದಿಸಿದ ಬಳಿಕ ಸಚಿವ ಸಂಪುಟ ಅನುಮೋದನೆ ಕೊಟ್ಟಿದೆ. ಆದರೆ ಈ ಮಸೂದೆಗೆ ವಿಪಕ್ಷಗಳು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದು, ಅಧಿವೇಶನದಲ್ಲಿ ಕೂಡ ವ್ಯಾಪಕ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.




