ಪಾಟ್ನಾ: ಯುಜಿಸಿ-ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಪ್ರಕರಣ ಸಂಬಂಧ ಮತ್ತೆ ಐವರನ್ನು ಬಿಹಾರ ಪೊಲೀಸರು ಬಂಧಿಸಿದ್ದು, ಪ್ರಕರಣದಲ್ಲಿ ಬಂಧಿತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.
ಜಾರ್ಖಾಂಡ್‌ನ ದಿಯೋಘಾರ್ ಹಾಗೂ ರಾಂಚಿಯಲ್ಲಿ ಐವರನ್ನು ಬಂಧಿಸಿದ್ದು, ಬಂಧಿತ ಐವರನ್ನು ಹೆಚ್ಚಿನ ವಿಚಾರಣೆಗಾಗಿ ಪಾಟ್ನಾ ಹೈಕೋರ್ಟ್‌ಗೆ ಕರೆತರಲಾಗಿದೆ.
ಬಂಧಿತರಲ್ಲಿ ಇಬ್ಬರಾದ ಅವದೇಶ್ ಹಾಗೂ ಅಭಿಷೇಕ್ ಅಪ್ಪ ಮಕ್ಕಳಾಗಿದ್ದು, ಇವರು ಪ್ರಕರಣದ ಪ್ರಮುಖ ಆರೋಪಿ ಸಿಖಂದರ್ ಯಾದವೆಂದು ಅವರ ಜೊತೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಅವದೇಶ್ ಪುತ್ರ ಅಭಿಷೇಕ್ ನೀಟ್ ಆಕಾಂಕ್ಷಿ, ಪ್ರಶ್ನೆ ಪತ್ರಿಕೆಗಾಗಿ ಸಿಕಂದರ್ ಯಾದವೆಂದು ಅವರಿಗೆ 40 ಲಕ್ಷ ರೂ.ಗಳನ್ನು ನೀಡಿರುವುದಾಗಿ ಅವದೇಶ್ ತಪ್ಪೊಪ್ಪಿಕೊಂಡಿದ್ದಾರೆ.
ಪ್ರಕರಣ ಸಂಬಂಧ ಈ ಮೊದಲು ಬಿಹಾರ ಪೊಲೀಸರು ಬಂಧಿಸಿರುವ 13 ಮಂದಿಯನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳು ಪರೀಕ್ಷೆಗೂ ಮೊದಲು ಅಂದಾಜು 35 ಜನ ವಿದ್ಯಾರ್ಥಿಗಳೊಂದಿಗೆ ಪ್ರಶ್ನೆ ಪತ್ರಿಕೆಗಳನ್ನು ಹಂಚಿಕೊಂಡಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ.
ಬಂಧಿತ ಒಬ್ಬ ಆರೋಪಿ ಈ ಹಿಂದೆ ಬಿಹಾರ ಲೋಕಸೇವಾ ಆಯೋಗ ನಡೆಸಿದ್ದ ಶಿಕ್ಷಕರ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಲ್ಲಾ 18 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಬಂಧಿತರಿಂದ ಪ್ರಕರಣ ಸಂಬಂಧಿಸಿದ ಸಾಕ್ಷ್ಯಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ.