ನವದೆಹಲಿ: ವಾಡಿಕೆಗಿಂತ ಆರು ದಿನಗಳ ಮೊದಲೇ ನೈರುತ್ಯ ಮುಂಗಾರು ಇಡೀ ದೇಶವನ್ನು ವ್ಯಾಪಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇಂದು ಕೊನೆಯದಾಗಿ ರಾಜಸ್ಥಾನ, ಹರಿಯಾಣ, ಪಂಜಾಬ್ ರಾಜ್ಯಗಳನ್ನು ಪ್ರವೇಶ ಮಾಡಿದೆ. ಈ ಮೂಲಕ ಜುಲೈ.2ರಂದು ಮುಂಗಾರು ಇಡೀ ದೇಶವನ್ನು ಆವರಿಸಿದಂತಾಗಿದೆ. ಸಾಮಾನ್ಯವಾಗಿ ಜುಲೈ.8ರಂದು ಮುಂಗಾರು ದೇಶವನ್ನು ವ್ಯಾಪಿಸುತ್ತಿತ್ತು ಎಂದು ಇಲಾಖೆ ಮಾಹಿತಿ ನೀಡಿದೆ.
ಮೇ.30ರಂದು ಮುಂಗಾರು ಕೇರಳವನ್ನು ಪ್ರವೇಶಿಸಿತ್ತು. ಮಹಾರಾಷ್ಟ್ರದವರೆಗೆ ತಲುಪಿದ ಬಳಿಕ ವೇಗ ಕಳೆದುಕೊಂಡಿತ್ತು. ಪರಿಣಾಮ ವಾಯುವ್ಯ ಭಾರತದಲ್ಲಿ ತಾಪಮಾನ ಏರಿಕೆಯಾಗಿತ್ತು. ಕ್ರಮೇಣ ವೇಗ ಪಡೆದ ಮುಂಗಾರು ವಾಡಿಕೆಗಿಂತ ಆರು ದಿನಗಳ ಮೊದಲೇ ದೇಶವನ್ನು ವ್ಯಾಪಿಸಿದೆ.
ಜುಲೈನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದ್ದು, ಭಾರೀ ಮಳೆಯಿಂದಾಗಿ ಪಶ್ಚಿಮ ಹಿಮಾಲಯದ ರಾಜ್ಯಗಳ ಮತ್ತು ದೇಶದ ಮಧ್ಯ ಭಾಗಗಳಲ್ಲಿರುವ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿ ಪ್ರವಾಹಕ್ಕೆ ಕಾರಣವಾಗಬಹುದು ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಮುಂಗಾರು ದೇಶಕ್ಕೆ ಪ್ರವೇಶ ನೀಡಿರುವ ಹಿನ್ನೆಲೆಯಲ್ಲಿ ಇಂದು ಅಥವಾ ನಾಳೆಯಿಂದ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.