ಮುಂಬೈ: ಶಿವಸೇನಾ ಪಕ್ಷದ ಸ್ಥಳೀಯ ಮುಖಂಡನ ಪುತ್ರ ಚಾಲನೆ ಮಾಡುತ್ತಿದ್ದ ಎನ್ನಲಾದ ಬಿಎಂಡಬ್ಲ್ಯೂ ಕಾರು ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ, ಮಹಿಳೆ ಮೃತಪಟ್ಟಿದ್ದ ಘಟನೆ ಭಾನುವಾರ(ಜು.8) ನಡೆದಿತ್ತು. ಈ ಪ್ರಕರಣ ಸಂಬಂಧ ಕಾರು ಚಾಲನೆ ಮಾಡುತ್ತಿದ್ದ 24 ವರ್ಷದ ಯುವಕನ ವಿರುದ್ಧ ಮುಂಬೈ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಅಪಘಾತ ನಡೆಸಿ ಪರಾರಿಯಾಗಿರುವ ಆರೋಪಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಬಣದ ನಾಯಕ ರಾಜೇಶ್ ಶಾ ಅವರು ಪುತ್ರ ಮಿಹಿರ್ ಶಾ ಎನ್ನಲಾಗಿದೆ. ಆರೋಪಿಯ ಬಂಧನಕ್ಕೆ ಪ್ರಯತ್ನಿಸುತ್ತಿರುವ ಪೊಲೀಸರು ವಿದೇಶಕ್ಕೆ ಹಾರದಂತೆ ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ.
ಈ ವೇಳೆ ಶಿಂಧೆ ಬಣದ ಶಿವಸೇನೆಯ ಪಾಲ್ಗರ್ ಜಿಲ್ಲೆಯ ಮುಖಂಡರಾಗಿರುವ ರಾಜೇಶ್ ಚಾಹ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ರಾಜೇಶ್ ಚಾಹ್ ಅವರ ಪುತ್ರನಿಗಾಗಿ ಶೋಧ ಕಾರ್ಯ ಜಾರಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜೇಶ್ ಚಾಹ್ ಅವರ ಪುತ್ರ ಮಿಹಿರ್ ಶಾಹ್ ಪೊಲೀಸರಿಗೆ ಶರಣಾಗುವ ಸಾಧ್ಯತೆಯಿದೆಯನ್ನಲಾಗಿದೆ.