ಹೈದರಬಾದ್ : ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸುವರ್ಣಲತಾ ಅವರು ನಿಧನರಾಗಿದ್ದಾರೆ. 85 ವರ್ಷದ ಸುವರ್ಣಲತಾ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದು ಇಂದು(ಮಾರ್ಚ್.30) ಹೈದರಾಬಾದ್ ನಲ್ಲಿ ಕೊನೆಯುಸಿರೆಳೆದಿದ್ದಾರೆ.
ಕರ್ನಾಟಕದ ಗದಗ ಮೂಲದವರಾದ ಸುವರ್ಣಲತಾ ಅವರು ಬೆಳಗಾವಿಯ ಅನಾಥಾಶ್ರಾಮದಲ್ಲಿ ಬಾಲ್ಯ ಜೀವನ ಕಳೆದಿದ್ದರು. ನರ್ಸಿಂಗ್ ಟ್ರೇನಿಂಗ್ ಮಾಡಿ ಬೆಂಗಳೂರಿಗೆ ಬಂದು ಜೀವನ ಕಟ್ಟಿಕೊಂಡಿದ್ದ ಅವರು, ಮಂಜುನಾಥ್ ರೈ ಎಂಬುವರ ಜೊತೆ ವಿವಾಹವಾಗಿದ್ದು ದಂಪತಿಗೆ ಮೂವರು ಮಕ್ಕಳು ಜನಿಸಿದರು. ಮೂವರ ಪೈಕಿ ಪ್ರಕಾಶ್ ರಾಜ್ ನಟನಾಗಿ ಗುರುತಿಸಿಕೊಂಡಿದ್ದಾರೆ.
ಸ್ವರ್ಣಲತಾ ಅವರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದರೆ, ಪತಿ ಮಂಜುನಾಥ್ ರೈ ಹಿಂದೂ ಆಗಿದ್ದರು. ಈ ಭಿನ್ನ ಸಂಸ್ಕೃತಿಗಳ ನಡುವೆ ಪ್ರಕಾಶ್ ರಾಜ್ ಬೆಳೆದಿದ್ದರು. ಪ್ರಕಾಶ್ ರಾಜ್ ಕುಟುಂಬದ ಹಿರಿಯ ಮಗನಾಗಿದ್ದು, ಅವರ ಸಹೋದರ ಪ್ರಸಾದ್ ರಾಜ್ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಇನ್ನೂ ಸುವರ್ಣಲತಾ ಅವರ ನಿಧನಕ್ಕೆ ಆಂಧ್ರಪ್ರದೇಶದ ಡಿಸಿಎಂ, ನಟ ಪವನ್ ಕಲ್ಯಾಣ್ ಅವರು ಸಂತಾಪ ಸೂಚಿಸಿದ್ದಾರೆ.




