ನವದೆಹಲಿ: ಕೆಲವು ದಿನಗಳ ಹಿಂದೆ ಅಧಿಕಾರಿಗಳು, ರೈತರು ಹಾಗೂ ಬೆಳೆಗಾರರು ಏಲ್ಲಕ್ಕಿ ಹಾಗೂ ಕರಿಮೆಣಸನ್ನು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ತರುವಂತೆ ಒತ್ತಾಯಿಸಿದ್ದರು. ಈ ವಿಚಾರವನ್ನು ತಿಳಿದ ಕೊಡಗು ಪ್ಲಾಟರ್ಸ್ ಕ್ಲಬ್ ಅವರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿಯಾಗಿ ಅವರ ಬೇಡಿಕೆಗಳನ್ನು ತಡೆಯುವಂತೆ ಮನವಿ ಸಲ್ಲಿಸಿದ್ದರು. ಹೀಗಾಗಿ ಈ ವಿಷಯದ ಕುರಿತು ಇಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದಾರೆ.
ಕೇಂದ್ರ ಸಚಿವರನ್ನು ಭೇಟಿಯಾಗಿರುವ ಕುರಿತು ಯದುವೀರ್ ಒಡೆಯರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ ಹಾಸನ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ರೈತರ ಮುಖ್ಯ ತೊಂದರೆಯಾದ ಕರಿಮೆಣಸಿನ ಜಿಎಸ್‌ಟಿ ವಿಷಯ ಕುರಿತು ಚರ್ಚಿಸಲು ಇಂದು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಲಾಗಿದೆ. ಈ ವೇಳೆ ರೈತರ ಕೃಷಿ ಉತ್ಪನ್ನ ವರ್ಗೀಕರಣ ಹಾಗೂ ರಫ್ತುಗಳ ಮೇಲೆ ನಡೆಯುವಂತಹ ಪರಿಣಾಮಗಳನ್ನು ತಿಳಿಸಿ, ವಿನಾಯಿತಿ ಮುಂದುವರಿಕೆಗೆ ವಿನಂತಿಸಲಾಗಿದೆ ಎಂದು ಭೇಟಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.