ನವದೆಹಲಿ: ಗೋವಾದಲ್ಲಿ ನಡೆದ ಐರನ್ ಮ್ಯಾನ್ 70.3 ಚಾಲೆಂಜ್‌ನಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಇತರೆ ಸ್ಪರ್ಧಿಗಳ ಜೊತೆ ಒಟ್ಟು 113 ಕಿ.ಮೀ.ನಷ್ಟು ದೂರ ಕ್ರಮಿಸಿ ಟ್ರಿಯಾಥ್ಲಾನ್ ಸವಾಲಿನಲ್ಲಿ ಪಾಲ್ಗೊಂಡ ಪ್ರಥಮ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ರೇಸ್‌ನ್ನು ತೇಜಸ್ವಿ ಸೂರ್ಯ ಅವರು, ಕೇವಲ 8 ಗಂಟೆ 27 ನಿಮಿಷ 32 ಸೆಕೆಂಡ್‌ಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಅಲ್ಲದೇ, ಈ ಸ್ಪರ್ಧೆಯಲ್ಲಿ 1.9 ಕಿ.ಮೀ ಈಜು, 90 ಕಿ.ಮೀ. ಸೈಕ್ಲಿಂಗ್ ಹಾಗೂ 21.1 ಕಿ.ಮೀ. ಓಟ ಸೇರಿದಂತೆ ಒಟ್ಟು 113 ಕಿ.ಮೀ. ದೂರ ಕ್ರಮಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ಖಾತೆಯಲ್ಲಿ ತೇಜಸ್ವಿ ಸೂರ್ಯರಿಗೆ ಅಭಿನಂದನೆ ಸಲ್ಲಿಸಿದ್ದು, ತೇಜಸ್ವಿ ಸೂರ್ಯ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಫಿಟ್‌ನೆಸ್ ಸಂಬಂಧಿತ ಚಟುವಟಿಕೆಗಳನ್ನು ಮುಂದುವರೆಸಲು ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಇನ್ನು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ತೇಜಸ್ವಿ ಸೂರ್ಯ ಮಾತನಾಡಿ, ಭಾರತ ಸೇರಿದಂತೆ ವಿಶ್ವದ ಕ್ರೀಡಾಪಟುಗಳು ಹಾಗೂ ಫಿಟ್ನೆಸ್ ಪ್ರಿಯರಿಗಾಗಿ ಐರನ್ ಮ್ಯಾನ್ ಸ್ಪರ್ಧೆ ಏರ್ಪಡಿಸಲಾಗಿದೆ. ಈ ರೇಸ್ ಗೋವಾದಲ್ಲಿ ನಡೆದಿದ್ದು, ಸುಮಾರು 50ಕ್ಕೂ ಅಧಿಕ ರಾಷ್ಟ್ರಗಳ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಬಳಿಕ, ಇದೊಂದು ಕಠಿಣ ಸ್ಪರ್ಧೆಯಾಗಿದ್ದು, ನಾನು ಕಳೆದ 4 ತಿಂಗಳಿನಿಂದ ಕಷ್ಟಕರ ತರಬೇತಿಯನ್ನು ಪಡೆದಿದ್ದೇನೆ. ಈ ಕಾರಣಕ್ಕಾಗಿಯೇ ನಾನು ಈ ಸ್ಪರ್ಧೆಯನ್ನು ಪೂರ್ಣಗೊಳಿಸಿ ಯಶಸ್ವಿಯಾಗಿದ್ದೇನೆ. ಅದಕ್ಕೆ ಪ್ರಧಾನಿ ಮೋದಿ ಅವರು ಆರಂಭಿಸಿದ ಫಿಟ್ ಇಂಡಿಯಾ ಅಭಿಯಾನವೇ ಸ್ಫೂರ್ತಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.





