Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಲೋಕಸಭೆ ಚುನಾವಣೆ ನಂತರ ಜಮ್ಮು-ಕಾಶ್ಮೀರದಲ್ಲಿ ಭುಗಿಲೆದ್ದ ಉಗ್ರವಾದ

ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆ ಹದ್ದಿನ ಕಣ್ಣಿಟ್ಟಿದ್ದರೂ ಭಯೋತ್ಪಾದಕ ದಾಳಿಗಳು ಮಾತ್ರ ಇನ್ನೂ ನಿಂತಿಲ್ಲ. ಲೋಕಸಭೆ ಚುನಾವಣೆ ನಂತರ ಇಲ್ಲಿ ಉಗ್ರರ ಅಟ್ಟಹಾಸ ಹೆಚ್ಚಾಗಿದೆ.

ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿ ಅಶಾಂತಿ ಮತ್ತೆ ಭುಗಿಲೆದ್ದಿದ್ದು, ಪಾಕ್‌ ಭಯೋತ್ಪಾದಕರ ಅಟ್ಟಹಾಸ ಜೋರಾಗಿಯೇ ಇದೆ. ದಿನದಿಂದ ದಿನಕ್ಕೆ ಪಾಕಿಸ್ತಾನದಿಂದ ನುಸುಳುತ್ತಿರುವ ಭಯೋತ್ಪಾದಕರು ಸರಣಿ ದಾಳಿ ನಡೆಸಿ ಯೋಧರು ಹಾಗೂ ನಾಗರಿಕರ ಸಾವಿಗೆ ಕಾರಣರಾಗುತ್ತಿದ್ದಾರೆ. ನಿನ್ನೆಯೂ ಕೂಡ ದೋಡಾ ಜಿಲ್ಲೆಯಲ್ಲಿ ಭಯೋತ್ಪಾದಕರ ದಾಳಿಗೆ ಸಿಲುಕಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

ಲೋಕಸಭೆ ಚುನಾವಣೆ ನಡೆದ ಬಳಿಕ ಇಲ್ಲಿಯ ತನಕ ಅಂದರೆ 42 ದಿನದಲ್ಲಿ ಸತತ 9 ಉಗ್ರರ ದಾಳಿಗಳು ನಡೆದಿವೆ. ದಾಳಿಯಿಂದ 12 ಮಂದಿ ಯೋಧರು ಹುತಾತ್ಮರಾಗಿದ್ದು, 13 ಮಂದಿ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭಯೋತ್ಪಾದಕರ ದಾಳಿಯಿಂದ 10 ಮಂದಿ ನಾಗರಿಕರು ಸಾವೀಗೀಡಾಗಿದ್ದು, 44 ಮಂದಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸತತ ದಾಳಿಗಳಲ್ಲಿ ಹಲವು ಉಗ್ರರನ್ನು ಹೊಡೆದುರುಳಿಸಿದ್ದು, ಎಷ್ಟು ಉಗ್ರರು ಸಾವನ್ನಪ್ಪಿದ್ದಾರೆ ಎಂಬ ನಿಖರ ಮಾಹಿತಿ ಇನ್ನೂ ಸಿಕ್ಕಿಲ್ಲ. ಆದರೂ ಇನ್ನೂ ಕೂಡ ಕಣಿವೆಯಲ್ಲಿ ಉಗ್ರರ ಉಪಟಳ ನಿಂತಿಲ್ಲ ಎನ್ನುವುದು ಆತಂಕಕ್ಕಾರಿ ವಿಷಯವಾಗಿದೆ. ಜೂನ್‌ ತಿಂಗಳಿನಿಂದ ಈವರೆಗೂ ಜಮ್ಮು, ಪೂಂಚ್‌, ರಜೌರಿ, ಕಥುವಾ, ದೋಡಾ ಮತ್ತು ರಿಯಾಸಿಯ ಪ್ರದೇಶಗಳಲ್ಲಿ ಹಿಂಸಾಚಾರಗಳು ಹೆಚ್ಚಾಗುತ್ತಿವೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು, ಸೇನಾ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ. ಜಮ್ಮು-ಕಾಶ್ಮೀರದ ದೋಡಾದಲ್ಲಿನ ಪರಿಸ್ಥಿತಿ ಮತ್ತು ಅಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಸದ್ಯ ಕಥುವಾ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿ ಬಳಿಕ ಭಾರತೀಯ ಸೇನೆ ಎಚ್ಚೆತ್ತುಕೊಂಡಿದ್ದು, ಉಗ್ರರನ್ನು ಸೆದೆಬಡಿಯಲು ಸರ್ವ ರೀತಿಯಲ್ಲೂ ಸಜ್ಜಾಗಿದೆ. ಮುಂದಿನ ದಿನಗಳಲ್ಲಿ ಉಗ್ರರ ಕೃತ್ಯಗಳನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ನಾವೆಲ್ಲರೂ ಕಾದುನೋಡಬೇಕಿದೆ.

 

 

Tags: