ನವದೆಹಲಿ: ವಿಶ್ವದಲ್ಲಿ ಅತ್ಯಂತ ದುಬಾರಿ ಮರವೊಂದಿದೆ. ಅದನ್ನು ಬೇರೆ ದುಬಾರಿ ಮರಗಳಂತೆ ಫರ್ನಿಚರ್ ಅಥವಾ ಮತ್ತೇನೋ ಮಾಡಲು ಬಳಸಲ್ಲ. ಬದಲಿಗೆ ಸುಗಂಧ ದ್ರವ್ಯಗಳನ್ನು ತಯಾರಿಸಲು ಬಳಸುತ್ತಾರೆ.
ಸುಗಂಧ ದ್ರವ್ಯಗಳ ಉತ್ಪಾದನೆಯಲ್ಲಿ ಬಳಸುವ ಆ ದುಬಾರಿ ಮರ ಬೇರಾವುದು ಅಲ್ಲ. ಅದುವೇ ಅಕ್ವಿಲೇರಿಯಾ. ಇದನ್ನು ವುಡ್ ಆಫ್ ದಿ ಗಾಡ್ಸ್ ಎಂದೂ ಸಹ ಕರೆಯಲಾಗುತ್ತದೆ. ಸುಗಂಧ ದ್ರವ್ಯ ಉದ್ಯಮದಲ್ಲಿ ಇದನ್ನು ದ್ರವಚಿನ್ನ ಅಂತಲೂ ಕರೆಯಲಾಗುತ್ತದೆ.
ಈ ಮರವನ್ನು ಶತಮಾನಗಳಿಂದ ವಿಶಿಷ್ಟ ಸುಗಂಧಕ್ಕಾಗಿ ಬಳಸಲಾಗುತ್ತದೆ. ಈ ಅಮೂಲ್ಯವಾದ ಮರವು ಆಗ್ನೇಯ ಏಷ್ಯಾದ ದಟ್ಟವಾದ ಮಳೆ ಕಾಡುಗಳಿಗೆ ಸ್ಥಳೀಯವಾದ ಮರವಾಗಿದೆ. ಈ ಮರಗಳಿಗೆ ನಿರ್ದಿಷ್ಟ ಅಚ್ಚು ಬಿದ್ದು ಅದಕ್ಕೆ ಸೋಂಕಿನ ರೀತಿ ಆಗುತ್ತದೆ.
ಈ ಸೋಂಕು ಉಂಟಾದಾಗ ಅಲ್ಲಿಂದ ಮರದಲ್ಲಿ ಒಂದು ರೀತಿಯ ಸ್ರಾವ ಹೊರಬರುತ್ತದೆ. ಅದಕ್ಕೆ ಔದ್ ಎನ್ನಲಾಗುತ್ತದೆ. ಇದು ಅದ್ಬುತ ಸುವಾಸನೆಯನ್ನು ಹೊರ ಸೂಸುತ್ತದೆ. ಇದೇ ಕೊನೆಯ ಸುಗಂಧ ತಯಾರಿಕೆಗೆ ಕಾರಣವಾಗುತ್ತದೆ. ಈ ಮರಗಳಲ್ಲಿ ಔದ್ ಸೃಷ್ಟಿಯಾಗೋದು ಸಂಪೂರ್ಣವಾಗಿ ನೈಸರ್ಗಿಕ ರೀತಿಯಲ್ಲೇ.
ಅಪರೂಪದ ಸಂಗತಿಯೆಂದರೆ ಈ ಮರಗಳ ಒಂದು ಭಾಗ ಮಾತ್ರ ರಾಳವನ್ನು ಉತ್ಪಾದಿಸುತ್ತದೆ. ನಂತರ ಇದು ಸಂಗ್ರಹವಾಗಲು ದಶಕಗಳನ್ನೇ ತೆಗೆದುಕೊಳ್ಳಬಹುದು. ಈ ಸ್ರಾವದ ಬೆಲೆ ಪ್ರತಿ ಕಿಲೋ ಗ್ರಾಂಗೆ ಚಿನ್ನಕ್ಕಿಂತ ದುಬಾರಿಯಾಗಿದೆ.
ಪ್ರಸ್ತುತ ಔದ್‌ನ ಬೇಡಿಕೆ ಹೆಚ್ಚಿದ್ದು, ಜನಪ್ರಿಯತೆಯ ಉಲ್ಬಣವು ಅಕ್ವಿಲೇರಿಯಾ ಮರಗಳ ಅಪಾಯಕ್ಕೆ ಕಾರಣವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸುಗಂಧ ದ್ರವ್ಯ ಉದ್ಯಮದಲ್ಲಿ ಔದ್ ಭಾರೀ ಜನಪ್ರಿಯವಾಗಿದೆ. ಪಾಶ್ಚಿಮಾತ್ಯ ಸುಗಂಧ ದ್ರವ್ಯದಲ್ಲಿ ಈ ಅಂಶ ಇರುವಂತೆ ಉತ್ಪಾದಿಸಲಾಗುತ್ತಿದೆ.