ಗುಂಟುರು(ಆಂಧ್ರಪ್ರದೇಶ): ಮತದಾನದ ವೇಳೆ ಮತ ಹಾಕಲು ಹೋದ ಶಾಸಕ ಉದ್ದಟತನ ಮೆರೆದ ಕಾರಣ ಸರತಿ ಸಾಲಿನಲ್ಲಿ ನಿಂತಿದ್ದ ಮತದಾರ ಶಾಸಕನಿಗೆ ಕಪಾಳಮೋಕ್ಷ ಮಾಡಿದ ಘಟನೆ ಜಿಲ್ಲೆಯ ತೆನಾಲಿ ವಿಧನಸಭಾ ಕ್ಷೇತ್ರದಲ್ಲಿ ನಡೆದಿದೆ.
ಕ್ಷೇತ್ರ ವ್ಯಾಪ್ತಿಯ ಐತಾನಗರದ ಮತಗಟ್ಟೆಗೆ ಮತ ಹಾಕಲು ಬಂದ ವೈಎಸ್‌ಆರ್‌ಸಿಪಿ ಶಾಸಕ ಶಿವಕುಮಾರ್ ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಒಳಗೆ ನುಗ್ಗಿದರು. ಈ ವೇಳೆ ಮತದಾರ ಸರತಿ ಸಾಲಿನಲ್ಲಿ ಬರುವಂತೆ ಒತ್ತಾಯಿಸಿದರು. ಇದರಿಂದ ಸಿಟ್ಟಾದ ಶಾಸಕ ಮತದಾರನಿಗೆ ಕಪಾಳಮೋಕ್ಷ ಮಾಡಿದರು. ಕೂಡಲೇ ಮತದಾರ ಕೂಡ ಶಾಸಕ ಶಿವಕುಮಾರ್ ಅವರ ಕೆನ್ನೆಗೆ ಬಾರಿಸಿದ. ಇದರಿಂದ ಕುಪಿತಗೊಂಡ ಶಾಸಕರ ಬೆಂಬಲಿಗರು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಮತದಾರ ಗಂಭೀರವಾಗಿ ಗಾಯಗೊಂಡಿದ್ದು, ಈ ಘಟನೆಯಿಂದ ಮತಗಟ್ಟೆ ಕೇಂದ್ರಕ್ಕೆ ಬಂದಿದ್ದ ಮತದಾರರೆಲ್ಲರೂ ಭಯಭೀತಗೊಂಡಿದ್ದರು.
ಮತದಾರರ ಮೇಲೆ ಹಲ್ಲೆಯ ಬಗ್ಗೆ ವಿಶೇಷ ಪೊಲೀಸ್ ವೀಕ್ಷಕ ಮಿಶ್ರಾ ಆಕ್ರೋಶ ವ್ಯಕ್ತಪಡಿಸಿ, ಘಟನೆಯ ದೃಶ್ಯವಳಿಯನ್ನು ತರುವಂತೆ ಆದೇಶಿಸಿದರು. ದೃಶ್ಯವಳಿ ವೀಕ್ಷಿಸಿದ ಅವರು ಹಿಂಸಾತ್ಮಕ ಘಟನೆ ನಡೆಯದಂತೆ ಮತಗಟ್ಟೆ ಅಧಿಕಾರಿಗೆ ಸೂಚಿಸಿ ಯಾವುದೇ ಹಿಂಸಾಚಾರ ನಡೆಯದಂತೆ ನೋಡಿಕೊಳ್ಳಬೇಕು ಎಂದರು.



