ನವದೆಹಲಿ: ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ವಿರುದ್ಧ ಇಂದು ಪ್ರತಿಪಕ್ಷಗಳು ಮತ್ತಷ್ಟು ವಾಗ್ದಾಳಿ ನಡೆಸಿವೆ.
ಮೇಲ್ಮನೆಯಲ್ಲಿ ಅತಡೆಗಡೆಗಳಿಗೆ ಅವರೇ ದೊಡ್ಡ ಕಾರಣ ಎಂದು ಗಂಭೀರ ಆರೋಪ ಮಾಡಿವೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ರಾಜ್ಯಸಭಾ ಅಧ್ಯಕ್ಷರ ಕಾರ್ಯವೈಖರಿ ಅವರ ಸ್ಥಾನದ ಘನತೆಗೆ ವ್ಯತಿರಿಕ್ತವಾಗಿದೆ. ಅವರು ಪ್ರತಿಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಆಗಾಗ್ಗೆ ಸರ್ಕಾರವನ್ನು ಹೊಗಳುತ್ತಾರೆ. ಅವರು ಸರ್ಕಾರದ ವಕ್ತಾರರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಅವರ ಕಾರ್ಯವೈಖರಿಯಿಂದಾಗಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದನ್ನು ಬಿಟ್ಟು ಪ್ರತಿಪಕ್ಷಗಳಿಗೆ ಬೇರೆ ಆಯ್ಕೆಯೇ ಇಲ್ಲ ಎಂದರು.
ನಾವು ಅವರ ನಡವಳಿಗೆ, ಪಕ್ಷಪಾತದಿಂದ ಬೇಸರಗೊಂಡಿದ್ದೇವೆ. ಸದನದಲ್ಲಿ ಸಭಾಪತಿಯವರ ನಡವಳಿಕೆಯು ದೇಶದ ಘನತೆಗೆ ಧಕ್ಕೆ ತಂದಿದೆ. ಅವರು ರಾಜ್ಯಸಭೆಯ ನಿಯಮಗಳಿಗಿಂತ ರಾಜಕೀಯಕ್ಕೆ ಆದ್ಯತೆ ನೀಡಿದ್ದಾರೆ ಎಂದು ದೂರಿದರು.





