ಮುಂಬೈ: ದೇಶದ ಗಮನ ಸೆಳೆದಿದ್ದ 2008ರ ಸೆಪ್ಟೆಂಬರ್. 29 ರಂದು ಮಹಾರಾಷ್ಟ್ರದ ಮಾಲೇಗಾಂವ್‍ನ ಮಸೀದಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ 7 ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.
17 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ ನಂತರ ಕಿಕ್ಕಿರಿದು ತುಂಬಿದ್ದ ನ್ಯಾಯಾಲಯದಲ್ಲಿ ಕಾಯ್ದಿರಿಸಿದ್ದ ತೀರ್ಪು ಪ್ರಕಟಿಸಿದ ಎನ್‍ಐಎ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎ.ಕೆ.ಲಾಹೋಟಿ ಅವರು ಪ್ರಕರಣದ ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ ಎಂದು ತೀರ್ಪು ಪ್ರಕಟಿಸಿದರು.
ತೀರ್ಪು ಹೊರಬೀಳುತ್ತಿದ್ದಂತೆ ಕಟಕಟೆಯಲ್ಲಿ ನಿಂತಿದ್ದ ಆರೋಪಿಗಳು ನೆಮ್ಮದಿಯ ನಿಟ್ಟುಸಿರಿನಿಂದ ಹೊರಬಂದರು. ನ್ಯಾಯಾಲಯದ ತೀರ್ಪಿನಿಂದಾಗಿ ದೇಶದಲ್ಲಿ ಕೇಸರಿ ಭಯೋತ್ಪಾದನೆ ನಡೆಯುತ್ತದೆ ಎಂಬ ವಿರೋಧಪಕ್ಷಗಳ ಆರೋಪಕ್ಕೆ ಪೂರ್ಣವಿರಾಮ ಬಿದ್ದಿದೆ. ಸ್ಫೋಟದ ಆರು ಸಂತ್ರಸ್ತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡ ಎಲ್ಲಾ ಸಂತ್ರಸ್ಥರಿಗೆ ತಲಾ 50,000 ರೂ. ಪರಿಹಾರವನ್ನು ನೀಡಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಈ ಪ್ರಕರಣದ ಆರೋಪಿಗಳಾಗಿದ್ದ ಬಿಜೆಪಿ ಮಾಜಿ ಸಂಸದೆ ಪ್ರಜ್ಞಾಸಿಂಗ್ ಠಾಕೂರ್, ಮಾಜಿ ಸೇನಾಧಿಕಾರಿ ಪ್ರಸಾದ್ ಪುರೋಹಿತ್ (ನಿವೃತ್ತ), ಮೇಜರ್ ರಮೇಶ್ ಉಪಾಧ್ಯಾಯ(ನಿವೃತ್ತ), ಸುಧಾಕರ್ ಚತುರ್ವೇದಿ, ಅಜಯ್ ರಹೀರ್ಕರ್, ಸುಧಾಕರ್ ಧರ್‍ದ್ವಿವೇದಿ ಅಲಿಯಾಸ್ ಶಂಕರಾಚಾರ್ಯ ಹಾಗೂ ಸಮೀರ್ ಕುಲಕರ್ಣಿ ಅವರನ್ನು ಪ್ರಕರಣದಿಂದ ಆರೋಪ ಮುಕ್ತಗೊಳಿಸಲಾಗಿದೆ.





