ಹೊಸದಿಲ್ಲಿ : ರಾಷ್ಟ್ರಪಿತಿ ಮಹಾತ್ಮ ಗಾಂಧಿ ಅವರ 78ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಇಂದು ರಾಷ್ಟ್ರಪತಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಗೌರವ ಸಮನ ಸಲ್ಲಿಸಿದ್ದಾರೆ.
ದಿಲ್ಲಿಯ ರಾಜ್‌ಘಟ್‌ನಲ್ಲಿನ ಗಾಂಧಿ ಅವರ ಸ್ಮಾರಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ರಾಧಾಕೃಷ್ಣನ್, ಪ್ರಧಾನಿ ಮೋದಿ ಸೇರಿದಂತೆ ಗಣ್ಯರು ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಗಾಂಧಿ ಅವರ ಸ್ವದೇಶಿ ಕರೆಯು ಅಭಿವೃದ್ಧಿ ಹೊಂದಿದ ಭಾರತಕ್ಕೆ ಮೂಲಭೂತ ತತ್ವವಾಗಿದೆ. ಇದು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತಕ್ಕಾಗಿ ಸರ್ಕಾರದ ಸಂಕಲ್ಪದ ಮೂಲಭೂತ ಆಧಾರ ಸ್ತಂಭವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ಅವರಿಗೆ ನನ್ನ ಗೌರವಗಳು. ಅವರ ವ್ಯಕ್ತಿತ್ವ ಮತ್ತು ಕಾರ್ಯಗಳು ದೇಶದ ಜನರನ್ನು ಕರ್ತವ್ಯದ ಹಾದಿಯಲ್ಲಿ ನಡೆಯಲು ಸದಾ ಪ್ರೇರೇಪಿಸುತ್ತಲೇ ಇರುತ್ತವೆ ಎಂದಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ, ಅಹಿಂಸೆಯ ತತ್ವವನ್ನು ಶ್ಲಾಘಿಸಿರುವ ಮೋದಿ, ಬಾಪು ಯಾವಾಗಲೂ ಮಾನವೀಯತೆಯ ರಕ್ಷಣೆಗಾಗಿ ಅಹಿಂಸೆಯನ್ನು ಒತ್ತಿ ಹೇಳುತ್ತಿದ್ದರು. ಶಸ್ತ್ರಾಸ್ತ್ರವಿಲ್ಲದೆ ಜಗತ್ತನ್ನು ಬದಲಾಯಿಸಬಲ್ಲ ಶಕ್ತಿ ಅದರಲ್ಲಿದೆ. ಅಹಿಂಸಾ ಪರಮ ಧರ್ಮಸ್ತ-ಥಾಹಿಂಸಾ ಪರಂತಪಃ, ಅಹಿಂಸಾ ಪರಮಂ ಸತ್ಯಂ ಯತೋ ಧರ್ಮಃ ಪ್ರವರ್ತತೇ (ಅಹಿಂಸೆಯೇ ಅಂತಿಮ ಕರ್ತವ್ಯ, ಅಹಿಂಸೆಯೇ ಅಂತಿಮ ತಪಸ್ಸು. ಅಹಿಂಸೆಯೇ ಅಂತಿಮ ಸತ್ಯ, ಮತ್ತು ಅದು ಸದಾಚಾರದ ಉದ್ದೇಶವನ್ನು ಮುನ್ನಡೆಸುತ್ತದೆ) ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಹಾತ್ಮ ಗಾಂಧಿಯವರ ಸ್ಮರಣೆ ಮಾಡಿದ್ದು, ದೇಶವನ್ನು ಬೇರ್ಪಡಿಸಿದ ದ್ವೇಷವನ್ನು ಗಾಂಧಿಯವರ ಮಾರ್ಗದಲ್ಲಿ ಮಾತ್ರ ಎದುರಿಸಲು ಸಾಧ್ಯ. ಬಾಪು ಅವರ ಸ್ವಂತ ಮಾರ್ಗ, ಸತ್ಯದ ಬೆಳಕು, ಅಹಿಂಸೆಯ ಶಕ್ತಿ ಮತ್ತು ಪ್ರೀತಿಯ ಕರುಣೆ ಇದರಲ್ಲೇ ಅಡಗಿದೆ. ಹುತಾತ್ಮರ ದಿನದಂದು ರಾಷ್ಟ್ರಪಿತನಿಗೆ ಗೌರವಗಳು ಎಂದು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ಅವರಿಗೆ ಗೌರವ ಸಲ್ಲಿಸಿದ್ದಾರೆ. ರಾಷ್ಟ್ರಪಿತನ ವಿಚಾರಗಳು ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತವೆ ಎಂದು ಹೇಳಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕೂಡ, ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ಅವರಿಗೆ ಗೌರವಪೂರ್ವಕ ನಮನಗಳು ಎಂದಿದ್ದಾರೆ.
ರಾಷ್ಟ್ರಪತಿ ಮಹಾತ್ಮಗಾಂಧಿ ಅವರನ್ನು 1948ರ ಜನವರಿ 30ರಂದು ಹತ್ಯೆ ಮಾಡಲಾಯಿತು. ಅವರ ಪುಣ್ಯತಿಥಿಯನ್ನು ಪ್ರತಿ ವರ್ಷ ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ. ದೇಶಾದ್ಯಂತ ನಾಯಕರು ಮತ್ತು ನಾಗರಿಕರು ಅವರ ಶಾಂತಿ, ಏಕತೆ ಮತ್ತು ನೈತಿಕ ಧೈರ್ಯದ ಶಾಶ್ವತ ಪರಂಪರೆಗೆ ಗೌರವ ಸಲ್ಲಿಸುತ್ತಾರೆ.





