ಮುಂಬೈ: ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಭಾರೀ ಹಿನ್ನಡೆ ಕಂಡಿದ್ದ ಎನ್‌ಡಿಎ ಮೈತ್ರಿಕೂಟ ಸರ್ಕಾರ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಜನಪ್ರಿಯ ಸ್ಕೀಮ್‌ಗಳಿಗೆ ಶರಣಾಗಿದೆ.
ಕರ್ನಾಟಕದ ಗೃಹಲಕ್ಷ್ಮೀ ಯೋಜನೆ ಮಾದರಿಯಲ್ಲಿ ಮಹಾರಾಷ್ಟ್ರದಲ್ಲೂ ಮಹಿಳೆಯರಿಗೆ ಸರ್ಕಾರ ಮಾಸಿಕ ಸಹಾಯಧನ ಒದಗಿಸಲು ಘೋಷಿಸಿದೆ. 21 ವರ್ಷದಿಂದ 60 ವರ್ಷದವರೆಗಿನ ವಯಸ್ಸಿನ ಮಹಿಳೆಯರಿಗೆ ಮಾಸಿಕವಾಗಿ 1500 ರೂ ನೀಡುವುದಾಗಿ ಡಿಸಿಎಂ ಅಜಿತ್ ಪವಾರ್ ತಮ್ಮ ಬಜೆಟ್‌ನಲ್ಲಿ ತಿಳಿಸಿದ್ದಾರೆ.
ಇದೇ ಅಕ್ಟೋಬರ್ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆಯಿದ್ದು, ಜನಪ್ರಿಯತೆ ಗಿಟ್ಟಿಸಲು ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಸಹಜವಾಗಿಯೇ ಬಹಳಷ್ಟು ಜನಪ್ರಿಯವೆನಿಸುವ ಸ್ಕೀಮ್‌ಗಳನ್ನು ಘೋಷಿಸಲಾಗಿದೆ.
ಸಿಎಂ ಅನ್ನಪೂರ್ಣ ಯೋಜನೆಯಡಿಯಲ್ಲಿ ಐದು ಮಂದಿ ಇರುವ ಅರ್ಹ ಕುಟುಂಬವೊಂದಕ್ಕೆ ವರ್ಷಕ್ಕೆ ಮೂರು ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಮಹಾರಾಷ್ಟ್ರದ ಹತ್ತಿ ಮತ್ತು ಸೋಯಾಬೀನ್ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ 5 ಸಾವಿರ ಬೋನಸ್ ಹಣವನ್ನು ಕೊಡಲಾಗುತ್ತದೆ. ಹಾಲು ಉತ್ಪಾದಕ ರೈತರಿಗೆ ಜುಲೈ.1ರ ಬಳಿಕ ಪ್ರತಿ ಲೀಟರ್ ಹಾಲಿಗೆ 5ರೂ ಹೆಚ್ಚುವರಿ ಬೋನಸ್ ಕೊಡಲಾಗುತ್ತದೆ. ಪ್ರಾಣಿಗಳ ದಾಳಿಯಿಂದ ಮೃತ ಪಡುವ ವ್ಯಕ್ತಿಗಳ ಸಂಬಂಧಿಕರಿಗೆ ನೀಡಲಾಗುವ ಪರಿಹಾರ ಹಣವನ್ನು 20 ಲಕ್ಷದಿಂದ 25 ಲಕ್ಷ ರೂಗೆ ಏರಿಸಲಾಗಿದೆ. ಇನ್ನೂ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಮಹಾರಾಷ್ಟ್ರ ಸರ್ಕಾರ ಇದೇ ವೇಳೆ ಇಳಿಕೆ ಮಾಡಿದೆ.