ಮುಂಬೈ : ಮಹಾರಾಷ್ಟ್ರದ ರಾಜಕೀಯದಲ್ಲಿ ಒಂದು ಐತಿಹಾಸಿಕ ಕ್ಷಣ. ಎನ್‌ಸಿಪಿ ನಾಯಕಿ ದಿ.ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ರಾಜ್ಯದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಶನಿವಾರ ಸಂಜೆ 5 ಗಂಟೆಗೆ ಮುಂಬೈನ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ ಅವರು ಸುನೇತ್ರಾ ಪವಾರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಮೂಲಕ ಮಹಾರಾಷ್ಟ್ರದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ನಾಯಕಿಯೊಬ್ಬರು ಉಪಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದಾರೆ.
ಅಜಿತ್ ಪವಾರ್ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟ ನಂತರ ಉಂಟಾದ ರಾಜಕೀಯ ಶೂನ್ಯತೆಯನ್ನು ತುಂಬಲು ಎನ್‌ಸಿಪಿ ತ್ವರಿತ ನಿರ್ಣಯ ಕೈಗೊಂಡಿತು. ಮಧ್ಯಾಹ್ನ 2 ಗಂಟೆಗೆ ವಿಧಾನಭವನದಲ್ಲಿ ನಡೆದ ಎನ್‌ಸಿಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸುನೇತ್ರಾ ಪವಾರ್ ಅವರನ್ನು ಏಕಮತದಿಂದ ಪಕ್ಷದ ಶಾಸಕಾಂಗ ನಾಯಕಿಯಾಗಿ ಆಯ್ಕೆ ಮಾಡಲಾಯಿತು. ಛಗನ್ ಭುಜಬಲ್ ಅವರು ಪ್ರಸ್ತಾಪಿಸಿ, ಇತರ ಹಿರಿಯ ನಾಯಕರು ಬೆಂಬಲಿಸಿದರು.
ಸುನೇತ್ರಾ ಪವಾರ್ ಅವರು ಈ ಹಿಂದೆ 2024ರ ಜೂನ್‌ನಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಆದರೆ ಉಪಮುಖ್ಯಮಂತ್ರಿ ಹುದ್ದೆಗೆ ಆಯ್ಕೆಯಾದ ನಂತರ ಅವರು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಪ್ರಮಾಣ ವಚನದ ನಂತರ 6 ತಿಂಗಳೊಳಗಾಗಿ ಅವರು ಮಹಾರಾಷ್ಟ್ರ ವಿಧಾನಸಭೆ ಅಥವಾ ವಿಧಾನ ಪರಿಷತ್ತಿಗೆ ಆಯ್ಕೆಯಾಗಬೇಕು. ಬಾರಾಮತಿ ಕ್ಷೇತ್ರದ ಉಪಚುನಾವಣೆಯೂ ಇದಕ್ಕೆ ಸಂಬಂಧಿಸಿದಂತೆ ಚರ್ಚೆಯಾಗುತ್ತಿದೆ.
ಈ ನಿರ್ಣಯಕ್ಕೆ ಮಹಾಯುತಿ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆಯಿಂದ ಬೆಂಬಲ ವ್ಯಕ್ತವಾಗಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸಹ ಸಮ್ಮತಿ ಸೂಚಿಸಿದ್ದರು.





