ನವದೆಹಲಿ: ಭಾರತೀಯ ಮೌಲ್ಯಗಳು ಹಾಗೂ ಸಂಸ್ಕೃತಿಯನ್ನು ಪಾಲಿಸುವವರಿಗೆ ಇದು ಬಹಳ ವಿಶೇಷವಾದ ದಿನ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
144 ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳ ಮಹಾ ಕುಂಭಮೇಳಕ್ಕೆ ಪ್ರಯಾಗ್‌ರಾಜ್‌ನಲ್ಲಿ ವಿದ್ಯುಕ್ತ ಚಾಲನೆ ದೊರೆತಿದೆ. ಲಕ್ಷಾಂತರ ನಾಗ ಸಾಧುಗಳು ಶಾಹಿ ಸ್ನಾನ ಮಾಡುವ ಮೂಲಕ ಕುಂಭಮೇಳಕ್ಕೆ ಚಾಲನೆ ನೀಡಿದ್ದಾರೆ.
ಮುಂದಿನ ತಿಂಗಳ ಫೆಬ್ರವರಿ.26ರವರೆಗೂ ಮಹಾಕುಂಭ ಮೇಳೆ ನಡೆಯಲಿದ್ದು, 40 ಕೋಟಿಗೂ ಅಧಿಕ ಜನರು ಭಾಗಿಯಾಗುವ ನಿರೀಕ್ಷೆಯಿದೆ.
ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದಲ್ಲಿ ಪುಣ್ಯಸ್ನಾನ ನಡೆಯಲಿದ್ದು, ಇದಕ್ಕಾಗಿ ಉತ್ತರ ಪ್ರದೇಶ ಸರ್ಕಾರದಿಂದ ಸಂಪೂರ್ಣ ತಯಾರಿ ನಡೆದಿದೆ.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಪಾಲಿಸುವ ಕೋಟ್ಯಾಂತರ ಜನರಿಗೆ ಇದು ಬಹಳ ವಿಶೇಷವಾದ ದಿನ. ಮಹಾಕುಂಭ ಮೇಳ ಪ್ರಯಾಗ್‌ರಾಜ್‌ನಲ್ಲಿ ಪ್ರಾರಂಭವಾಗಿದ್ದು, ನಂಬಿಕೆ, ಭಕ್ತಿ ಮತ್ತು ಸಂಸ್ಕೃತಿಯ ಪವಿತ್ರ ಸಂಗಮದಲ್ಲಿ ಅಸಂಖ್ಯಾತ ಜನರನ್ನು ಒಟ್ಟುಗೂಡಿಸುತ್ತದೆ. ಮಹಾಕುಂಭವು ಭಾರತದ ಕಾಲಾತೀತ ಆಧ್ಯಾತ್ಮಿಕ ಪರಂಪರೆಯನ್ನು ಸಾಕಾರಗೊಳಿಸುತ್ತದೆ. ನಂಬಿಕೆ ಮತ್ಯು ಸಾಮರಸ್ಯವನ್ನು ಎತ್ತಿ ಹಿಡಿಯುತ್ತದೆ ಎಂದು ಹೇಳಿದ್ದಾರೆ.
ಮತ್ತೊಂದು ಪೋಸ್ಟ್ ಮಾಡಿರುವ ಅವರು ಪವಿತ್ರ ಸ್ನಾನ ಮಾಡಿ ಆಶೀರ್ವಾದ ಪಡೆಯಲು ಅಸಂಖ್ಯಾತ ಜನರು ಪ್ರಯಾಗ್‌ರಾಜ್‌ಗೆ ಬರುತ್ತಿರುವುದನ್ನು ನೋಡಿ ನನಗರ ಸಂತೋಷವಾಗಿದೆ. ಎಲ್ಲಾ ಯಾತ್ರಿಕರು ಮತ್ತು ಪ್ರವಾಸಿಗರಿಗೆ ಶುಭ ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.





