ಪ್ರಯಾಗ್ ರಾಜ್: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದು ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಭೇಟಿ ನೀಡಿ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.
ಇಂದು ಪ್ರಯಾಗ್ ರಾಜ್‌ಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲೆ ಆನಂದಿಬೆಲ್ ಪಟೇಲ್ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಅವರು ಸ್ವಾಗತಿಸಿದರು.
ಬಳಿಕ ಪ್ರಯಾಗ್ ರಾಜ್‌ನ ತ್ರಿವೇಣಿ ಸಂಗಮಕ್ಕೆ ತೆರಳಿದ ಮುರ್ಮು ಅವರು, ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಸ್ನಾನದ ಬಳಿಕ ಅಕ್ಷಯವತ್ ಮತ್ತು ಬಡೇ ಹನುಮಾನ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸಹ ಇದ್ದರು.
ಇನ್ನು ಜನವರಿ.13ರಿಂದ ಆರಂಭವಾಗಿರುವ ಮಹಾಕುಂಭಮೇಳವು ಶಿವರಾತ್ರಿವರೆಗೂ ನಡೆಯಲಿದೆ. ಇಲ್ಲಿಯವರೆಗೆ 50 ಕೋಟಿಗೂ ಅಧಿಕ ಜನರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದು, ಮಹಾಕುಂಭಮೇಳ ನಡೆಯುವ ತನಕ ಇನ್ನೂ ಕೋಟ್ಯಾಂತರ ಜನರು ಪವಿತ್ರ ಸ್ನಾನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮಹಾಕುಂಭಮೇಳವು ವಿಶ್ವದ ಅತಿದೊಡ್ಡ ಆಧ್ಮಾತ್ಮಿಕ ಮತ್ತು ಸಾಂಸ್ಕೃತಿಕ ಸಭೆಯಾಗಿದ್ದು, ಜಗತ್ತಿನಾದ್ಯಂತ ಕೋಟ್ಯಾಂತರ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.