ಮೈಸೂರು: ದೇಶದಲ್ಲಿ ಈಗಾಗಲೇ ನಾಲ್ಕು ಹಂತದ ಚುನಾವಣೆಗಳು ಮುಗಿದಿದ್ದು, ಇನ್ನು ಮೂರು ಹಂತದ ಚುನಾವಣೆಗಳು ಬಾಕಿ ಇವೆ. ಐದನೇ ಹಂತದ ಚುನಾವಣೆ ನಾಳೆ(ಮೇ.೨೦) ನಡೆಯಲಿದ್ದು, ಘಟಾನುಘಟಿಗಳು ಸ್ಪರ್ಧಿಸಿರುವ ಹೈವೋಲ್ಟೆಜ್ ಕ್ಷೇತ್ರಗಳಿಂದ ಕೂಡಿದ ಐದನೇ ಹಂತದ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ.
ಐದನೇ ಹಂತದಲ್ಲಿ ಒಟ್ಟು ೮ ರಾಜ್ಯಗಳ ೪೯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶ ೧೪, ಮಹಾರಾಷ್ಟ್ರ ೧೩, ಪಶ್ಚಿಮ ಬಂಗಾಳ ೭, ಬಿಹಾರ, ಒಡಿಶಾ ೫, ಜಾರ್ಖಾಂಡ್‌ನ ೩ ಹಾಗೂ ಜಮ್ಮು ಕಾಶ್ಮೀರದ ಒಂದು ಕ್ಷೇತ್ರದಲ್ಲಿ ಮತದಾನ ಜರುಗಲಿದೆ. ಒಟ್ಟು ೬೯೫ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕಣದಲ್ಲಿರುವ ಪ್ರಮುಖರು: ರಾಯ್ ಬರೇಲಿ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಮೇಥಿ ಕ್ಷೇತ್ರದಿಂದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಲಕ್ನೋದಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೈಸರ್‌ಗಂಜ್‌ನಿಂದ ಬ್ರಿಜ್ ಭೂಷಣ್ ಸಿಂಗ್ ಅವರ ಮಗ ಕರಣ್ ಭೂಷಣ್ ಸಿಂಗ್, ಮುಂಬೈ ಉತ್ತರ ಕ್ಷೇತ್ರದಿಂದ ಸಚಿವ ಪಿಯೂಷ್ ಗೋಯಲ್ ಹಾಗೂ ಬಾರಾಮುಲ್ಲಾದಿಂದ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಓಮರ್ ಅಬ್ದುಲ್ಲಾ ಕಣದಲ್ಲಿರುವ ಪ್ರಮುಖರು.
ಲೋಕಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆಯುತ್ತಿದೆ. ಏಪ್ರಿಲ್ ೧೯, ಏಪ್ರಿಲ್ ೨೬, ಮೇ ೭, ಮೇ ೧೩, ಮೇ ೨೦. ಮೇ ೨೫, ಜೂನ್ ೧ ರಂದು ಮತದಾನ ನಡೆಯಲಿದೆ. ಮತ ಎಣಿಕೆ ಜೂನ್ ೪ ರಂದು ನಡೆಯಲಿದೆ.





