ನವದೆಹಲಿ: ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನವು ಶನಿವಾರ(ಮೇ.25) ಮುಕ್ತಾಯವಾಗಿದ್ದು, ಶೇ.59 ರಷ್ಟು ಮತದಾನ ದಾಖಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಏಳು ರಾಜ್ಯ, ಒಂದು ಕೇಂದ್ರಾಡಳಿತ ಪ್ರದೇಶದ 58 ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಹಿಂಸಾಚಾರದ ವರದಿಗಳ ನಡುವೆಯೂ 6ನೇ ಹಂತದ ಮತದಾನದಲ್ಲಿ ಪಶ್ಚಿಮ ಬಂಗಾಳದಲ್ಲಿ ಶೇ.78.19ರಷ್ಟು ಮತದಾನವಾಗಿದ್ದು, ದೆಹಲಿಯಲ್ಲಿ ಶೇ.34.4 ಅಂದರೆ ಅತ್ಯಂತ ಕಡಿಮೆ ಮತದಾನವಾಗಿದೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ -ರಜೌರಿ ಲೋಕಸಭಾ ಕ್ಷೇತ್ರದಲ್ಲಿ 52.28 ರಷ್ಟು ಮತದಾನವಾಗಿದ್ದು, ಹಲವು ದಶಕಗಳಲ್ಲಿ ನಡೆದಿರುವ ಅತ್ಯಧಿಕ ಮತದಾನ ಪ್ರಮಾಣ ಇದಾಗಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಹಲವು ಪ್ರಮುಖರು ತಮ್ಮ ಮತದಾನದ ಹಕ್ಕನ್ನು ದೆಹಲಿಯಲ್ಲಿ ಚಲಾಯಿಸಿದರು.





