ನವದೆಹಲಿ: ಪಾಟ್ನಾದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುವ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಪೊಲೀಸರ ಈ ಕ್ರೌರ್ಯದ ನಡೆಯನ್ನು ಕಾಂಗ್ರೆಸ್ ನಾಯಕಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಖಂಡಿಸಿದ್ದಾರೆ.
ಬಿಹಾರ ಲೋಕಸೇವಾ ಆಯೋಗ (ಬಿಪಿಎಸ್‌ಸಿ) ಡಿಸೆಂಬರ್.13ರಂದು ಪೂರ್ವಭಾವಿ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆ ವೇಳೆ ಹಲವಾರು ಕಡೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆಗೆ ಮುಂದಾಗಿದ್ದರು. ಈ ವೇಳೆ ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹಲವರು ಗಾಯಗೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಾಟ್ಸಪ್ ಚಾನೆಲ್‌ನಲ್ಲಿ ಪ್ರತಿಕ್ರಿಯಿಸಿರುವ ಸಂಸದೆ ಪ್ರಿಯಾಂಕಾ ಗಾಂಧಿ ಅವರು, ಲಾಠಿ ಚಾರ್ಜ್ ನಡೆಸಿರುವುದು ಕ್ರೌರ್ಯದ ಪರಮಾವಧಿ. ಬಿಜೆಪಿ ಆಡಳಿತದ ಅವಧಿಯಲ್ಲಿ ಯುವಕರು ಉದ್ಯೋಗ ಕೇಳುವ ಹಾಗಿಲ್ಲ. ದೇಶದಲ್ಲಿ ನಿರುದ್ಯೋಗದ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಈ ಕುರಿತು ಯುವಕರು ದೇಶದ ಯಾವುದೇ ಪ್ರದೇಶದಲ್ಲಿ ಧ್ವನಿ ಎತ್ತಿದರೂ ಬಿಜೆಪಿ ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುವಕರು ಈ ದೇಶದ ಮುಂದಿನ ಆಸ್ತಿ. ಅವರಿಗಾಗಿ ಯೋಜನೆ ರೂಪಿಸುವುದು ಸರ್ಕಾರದ ಕರ್ತವ್ಯ. ಆದರೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಉದ್ಯೋಗಕ್ಕೆ ಸಂಬಂಧಿಸಿದಂತೆ ಹೊಸ ಅಧಿಸೂಚನೆಗಳನ್ನು ಹೊರಡಿಸುವ ಬದಲು ತಮ್ಮ ಕುರ್ಚಿ ಉಳಿಸಿಕೊಳ್ಳುವ ಯೋಚನೆ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.





