ನವದೆಹಲಿ: ಕೇರಳ ರಾಜ್ಯದ ಹೆಸರನ್ನು ಅಧಿಕೃತವಾಗಿ ಕೇರಳಂ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ ತೋರಿಸಿದೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲು ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ಕೇಂದ್ರ ಸರ್ಕಾರ ಈ ಮಹತ್ವದ ರಾಜಕೀಯ ತೀರ್ಮಾನ ಕೈಗೊಂಡಿದೆ.
ಕಳೆದ 2024ರಲ್ಲಿ ಕೇರಳ ವಿಧಾನಸಭೆಯು ರಾಜ್ಯದ ಹೆಸರನ್ನು ಬದಲಾಯಿಸುವಂತೆ ಕೋರಿ ಅವಿರೋಧವಾಗಿ ನಿರ್ಣಯ ಅಂಗೀಕರಿಸಿತ್ತು. ಇದು ರಾಜ್ಯದ ಮೂಲ ಸಾಂಸ್ಕೃತಿಕ ಮತ್ತು ಭಾಷಾ ಪರಂಪರೆಯನ್ನು ಮರುಸ್ಥಾಪಿಸುವ ದೀರ್ಘಕಾಲದ ಬೇಡಿಕೆಯಾಗಿತ್ತು.
ರಾಜ್ಯ ವಿಧಾನಸಭೆಯು ತನ್ನ ಅಭಿಪ್ರಾಯ ತಿಳಿಸಿದ ನಂತರ, ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ವಿಧೇಯಕವನ್ನು ಮಂಡಿಸಲು ರಾಷ್ಟ್ರಪತಿಗಳ ಶಿಫಾರಸ್ಸನ್ನು ಕೋರಲಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆ ದೊರೆತ ನಂತರ ಹೆಸರು ಬದಲಾವಣೆ ಅಧಿಕೃತಗೊಳ್ಳಲಿದೆ.





