ಬೆಂಗಳೂರು: ನಲ್ಲಮಲ್ಲ ಮೀಸಲು ಅರಣ್ಯ ಪ್ರದೇಶದಲ್ಲಿನ ಕಾಡು ಪ್ರಾಣಿಗಳು, ಪರಿಸರ ಸಂರಕ್ಷಣೆಯ ಹಿತದೃಷ್ಠಿಯಿಂದಾಗಿ ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ 9 ತರಬೇತಿ ಪಡೆದ ಆನೆಗಳನ್ನು ಕಳುಹಿಸಿಕೊಡಲು ರಾಜ್ಯ ಅರಣ್ಯ ಇಲಾಖೆ ಸಮ್ಮತಿಸಿದೆ.
ಆಂಧ್ರ ಅರಣ್ಯ ಇಲಾಖೆ ನಲ್ಲಮಲ್ಲ ಅರಣ್ಯ ಪ್ರದೇಶದಲ್ಲಿನ ಬೆಲೆಬಾಳುವ ಅಪರೂಪದ ಪ್ರಭೇದಗಳು, ಮರಗಳು, ಪ್ರಾಣಿಗಳ ಸಂರಕ್ಷಣೆಗಾಗಿ ರೇಂಜರ್, ಮುಷ್ಕರ ಪಡೆಗಳು, ನೌಕರರು ಹಾಗೂ ಕಳ್ಳಬೇಟೆ ನಿಗ್ರಹ ದಳಗಳನ್ನು ಆಯೋಜಿಸಿದೆ. ಇದರ ಜೊತೆಗೆ ರಾಜ್ಯದಲ್ಲಿ ತರಬೇತಿ ಪಡೆದ 9 ಆನೆಗಳನ್ನು ಕಾರ್ಯಾಚರಣೆಗಾಗಿ ಬಳಸಲು ಅವರು ಮನವಿ ಮಾಡಿದ್ದಾರೆ.
ಕಳ್ಳ ಮಾರ್ಗಗಳ ಮೂಲಕ ಅಕ್ರಮ ಚಟುವಟಿಕೆಗಳನ್ನು ಮಾಡುತ್ತಿರುವ ಕಳ್ಳ ಸಾಗಾಣೆದಾರರು ಹಾಗೂ ಬೇಟೆಗಾರರನ್ನು ಸೆರೆಹಿಡಿಯಲು ಅಗತ್ಯ ನವೀನ ತಂತ್ರಜ್ಞಾನ ಬಳಸಿದ್ದರೂ ಸಹಾ ಬೇಟೆಗಾರರು ತಮ್ಮ ಕೆಲಸಗಳನ್ನು ಮುಂದುವರೆಸುತ್ತಿದ್ದಾರೆ. ಹೀಗಾಗಿ ಅರಣ್ಯ ಸಂಪತ್ತನ್ನು ಸಂರಕ್ಷಿಸಲು ತರಬೇತಿ ಪಡೆದ ಆನೆಗಳನ್ನು ನಿಯೋಜಿಸಿ ಅಕ್ರಮ ತಡೆಗಟ್ಟಲು ಆಂಧ್ರಪ್ರದೇಶ ಸರ್ಕಾರ ಯೋಜನೆ ರೂಪಿಸಿದ್ದು, ರಾಜ್ಯದಿಂದ ತರಬೇತಿ ಪಡೆದ ಆನೆಗಳನ್ನು ಕಳುಹಿಸಿಕೊಡುವಂತೆ ಕೋರಿದ್ದರು.
ಇನ್ನು ಈ ಮನವಿಗೆ ಸ್ಪಂದಿಸಿದ ರಾಜ್ಯ ಅರಣ್ಯ ಇಲಾಖೆ ತರಬೇತಿ ಪಡೆದ 9 ಆನೆಗಳನ್ನು ಕಳುಹಿಸಿಕೊಡಲು ಸಮ್ಮತಿಸಿದ್ದಾರೆ. ಮತ್ತು ತರಬೇತಿ ಪಡೆದ ಆನೆಗಳನ್ನು ಮುನ್ನಡೆಸಲು ಮಾವುತ ಹಾಗೂ ಸಹಚರರಿಗೆ ತರಬೇತಿ ನೀಡುವ ಬಗ್ಗೆ ಹಾಗೂ ಆನೆಗಳ ಆಹಾರ ಪದ್ದತಿ, ಚಲನವಲನ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವ ಬಗ್ಗೆ ತರಬೇತಿ ನೀಡಲಾಗುವುದು ಎಂದು ಆಂಧ್ರಪ್ರದೇಶ ಪೆದ್ದ ದೋರ್ನಾಳ ಅರಣ್ಯ ವಲಯಾಧಿಕಾರಿ ವಿಶ್ವೇಶ್ವರ ರಾವ್ ಹೇಳಿದ್ದಾರೆ.