ನವದೆಹಲಿ: ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಹಲವು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ.
ಜಾರ್ಖಂಡ್ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿಯೊಬ್ಬ ಮಹಿಳೆಗೆ ತಿಂಗಳಿಗೆ 2,100 ರೂ ನೀಡಲಾಗುತ್ತದೆ. ಪ್ರತಿ ಮನೆಗೆ 500ರೂಗೆ ಎಲ್ಪಿಜಿ ಸಿಲಿಂಡರ್ ಹಾಗೂ ವಾರ್ಷಿಕವಾಗಿ 2 ಉಚಿತ ಸಿಲಿಂಡರ್ ನೀಡಲಾಗುತ್ತದೆ. ಇನ್ನು 5 ವರ್ಷಗಳಲ್ಲಿ ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ 5 ಲಕ್ಷ ಅವಕಾಶಗಳನ್ನು ಖಾತರಿಪಡಿಸುತ್ತೇವೆ ಎಂದು ಮಾಹಿತಿ ನೀಡಿದರು.
ಇವೆಲ್ಲದರ ಜೊತೆಗೆ ಇನ್ನೂ ಅನೇಕ ಯೋಜನೆಗಳನ್ನು ಘೋಷಣೆ ಮಾಡಲಾಗಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ಜನರ ಬದುಕು ಹಸನಾಗಲಿದೆ. ಹಾಗಾಗಿ ಎಲ್ಲರೂ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.
81 ಸದಸ್ಯ ಬಲ ಹೊಂದಿರುವ ಜಾರ್ಖಂಡ್ ವಿಧಾನಸಭಾ ಚುನಾವಣೆ ನವೆಂಬರ್.13 ಹಾಗೂ 20ರಂದು ನಡೆಯಲಿದ್ದು, ನವೆಂಬರ್.23ರಂದು ಮತ ಎಣಿಕೆ ನಡೆಯಲಿದೆ.