Mysore
20
overcast clouds
Light
Dark

ಹೊಸ ರಾಜಕೀಯ ಪಕ್ಷ ಆರಂಭಿಸುವ ಸುಳಿವು ನೀಡಿದ ಚಂಪೈ ಸೊರೆನ್‌

ನವದೆಹಲಿ: ಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೆನ್‌ ಅವರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಹರಡುತ್ತಿದ್ದಂತೆ, ಸೊರೆನ್ ಈಗ ಸ್ಪಷ್ಟನೆ ನೀಡಿದ್ದು, ಹೊಸ ರಾಜಕೀಯ ಪಕ್ಷ ಆರಂಭಿಸುವ ಸುಳಿವು ನೀಡಿದ್ದಾರೆ.

ಈ ಬಗ್ಗೆ ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯದಿಂದ ನಿವೃತ್ತಿ ಹೊಂದುವುದು, ಹೊಸ ಪಕ್ಷವನ್ನು ಆರಂಭಿಸುವುದು ಅಥವಾ ಇನ್ನೊಂದು ಪಕ್ಷವನ್ನು ಸೇರುವುದು ನನ್ನ ಮುಂದಿರುವ ಆಯ್ಕೆಗಳು. ಸದ್ಯಕ್ಕೆ ನಿವೃತ್ತಿಯಾಗುವುದಿಲ್ಲ. ಹೀಗಾಗಿ ನನ್ನ ಮುಂದೆ ಇನ್ನೆರಡು ಆಯ್ಕೆಗಳಿವೆ. ನಾನೇಕೆ ನನ್ನ ಸ್ವಂತ ಪಕ್ಷವನ್ನು ರಚಿಸಬಾರದು ಎಂದು ಪ್ರಶ್ನಿಸಿದರು. ನನ್ನ ಮುಂದಿನ ನಡೆ ಒಂದು ವಾರದಲ್ಲಿ ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಆಗಸ್ಟ್.‌18ರಂದು ಅವರು ಕೆಲವು ಶಾಸಕರೊಂದಿಗೆ ದೆಹಲಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಸೇರ್ಪಡೆಯಾಗಬಹುದು ಎಂದು ಊಹಿಸಲಾಗಿತ್ತು. ಆಪಾದಿತ ಭೂ ಹಗರಣ ಪ್ರಕರಣದಲ್ಲಿ ಜನವರಿ.31ರಂದು ಇ.ಡಿ ಹೇಮಂತ್‌ ಸೋರೆನ್‌ ಅವರನ್ನು ಬಂಧಿಸಿದ ನಂತರ 67 ವರ್ಷದ ಚಂಪೈ ಸೊರೆನ್‌ ಅವರು ಜಾರ್ಖಂಡ್‌ ಮುಖ್ಯಮಂತ್ರಿಯಾದರು.

ಹೇಮಂತ್‌ ಸೊರೆನ್‌ ಅವರಿಗೆ ಜಾರ್ಖಂಡ್‌ ಹೈಕೋರ್ಟ್‌ ಜಾಮೀನು ನೀಡಿದ ನಂತರ ಜುಲೈ.3ರಂದು ಅವರು ಹುದ್ದೆಯಿಂದ ಕೆಳಗಿಳಿದರು. ಈಗ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ್ದು, ಅವರ ಮುಂದಿನ ನಡೆ ಹೇಗಿರಲಿದೆ ಎಂಬುದೇ ಭಾರೀ ಕುತೂಹಲಕಾರಿಯಾಗಿದೆ.