ಬಿಹಾರ : ಒಬ್ಬ ಜೈಲು ಅಧಿಕಾರಿ ಜೈಲಿಗೆ ಹೋಗಿ 50 ಗಂಟೆ ಕಳೆದರೆ ಆತನನ್ನು ಸೇವೆಯಿಂದ ಅಮಾನತುಪಡಿಸಲಾಗುತ್ತದೆ. ಇದೇ ನಿಯಮ ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗೂ ಸಚಿವರಿಗೂ ಅನ್ವಯವಾಗಬೇಕಲ್ಲವೇ? ಎಂದು ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಸರ್ಕಾರದ ಉದ್ದೇಶಿತ ಕ್ರಿಮಿನಲ್ ಮೊಕದ್ದಮೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಬಿಹಾರದ ಗಯಾದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಸರ್ಕಾರಿ ಅಧಿಕಾರಿಯೊಬ್ಬ ಯಾವುದೋ ಪ್ರಕರಣದಲ್ಲಿ ಜೈಲು ಸೇರಿ 50 ಗಂಟೆ ಕಳೆದರೆ ಆತನನ್ನು ಸೇವೆಯಿಂದ ವಜಾ ಮಾಡುತ್ತೇವೆ. ಅದೇ ರೀತಿ ಉನ್ನತ ಸ್ಥಾನದಲ್ಲಿರುವ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರಿಗೂ ಈ ನಿಯಮ ಏಕೆ ಅನ್ವಯಿಸಬಾರದು? ಎಂದು ಪ್ರಶ್ನಿಸಿದರು.
ಜೈಲಿನ ಅಧೀಕ್ಷಕರೇ ಇರಲಿ, ಚಾಲಕ, ಕ್ಲರ್ಕ್, ಗುಮಾಸ್ತ ಸೇರಿದಂತೆ ಸರ್ಕಾರಿ ಅಧಿಕಾರಿಗಳು 50 ಗಂಟೆಯೊಳಗೆ ಜೈಲಿನಲ್ಲಿದ್ದರೆ ಸಹಜವಾಗಿ ಅಮಾನತುಗೊಳ್ಳುತ್ತಾರೆ. ಆದರೆ ಕೆಲವರು ಜೈಲಿನಲ್ಲಿ ಕುಳಿತುಕೊಂಡೇ ಅಧಿಕಾರ ಅನುಭವಿಸಬೇಕು ಎಂಬ ಕನಸು ಕಾಣುತ್ತಿದ್ದಾರೆ ಎಂದು ಪರೋಕ್ಷವಾಗಿ ಪ್ರತಿಪಕ್ಷದ ವಿರುದ್ಧ ಕಿಡಿಕಾರಿದರು.
ನಮ್ಮ ಎನ್‍ಡಿಎ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಸಮರವನ್ನೇ ಸಾರಿದೆ. ಹೀಗಾಗಿಯೇ ನಾವು ಕ್ರಿಮಿನಲ್ ಮೊಕದ್ದಮೆಯನ್ನು ಮಂಡಿಸಿದ್ದೇವೆ. ಪ್ರಧಾನಮಂತ್ರಿ, ಮುಖ್ಯಮಂತ್ರಿ ಮತ್ತು ಸಚಿವರು 30 ದಿನ ಜೈಲಿನಲ್ಲಿದ್ದರೆ ಅವರನ್ನು ತೆಗೆದು ಹಾಕುವ ಕಾನೂನು ಇದರಲ್ಲಿದೆ ಎಂದು ಹೇಳಿದರು.




