Mysore
18
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಐತಿಹಾಸಿಕ ಮೈಲಿಗಲ್ಲಿನತ್ತ ದಾಪುಗಾಲಿಟ್ಟ ಇಸ್ರೋ

ನವದೆಹಲಿ: ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ (ISRO) ತನ್ನ ಮಹತ್ವಾಕಾಂಕ್ಷೆ ಯೋಜನೆ ಸ್ಪಾಡೆಕ್ಸ್‌ (SpaDeX) ಉಪಗ್ರಹಗಳ ಪ್ರಾಯೋಗಿಕ ಜೋಡಣೆಯ ಪ್ರಯತ್ನ ಮಾಡುವ ಮುಖಾಂತರ ಬಾಹ್ಯಾಕಾಶ ಡಾಕಿಂಗ್‌ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ನಾಲ್ಕನೇ ರಾಷ್ಟ್ರವಾಗುವತ್ತ ದಾಪುಗಾಲಿಟ್ಟಿದೆ.

ಈ ಬಗ್ಗೆ ʼಎಕ್ಸ್‌ʼ ನಲ್ಲಿ ಟ್ವೀಟ್‌ ಮಾಡಿರುವ ಇಸ್ರೋ, ಬಾಹ್ಯಾಕಾಶದಲ್ಲಿ ಜೋಡಣೆ ಪ್ರಯತ್ನಕ್ಕಾಗಿ ಉಡಾವಣೆ ಮಾಡಿರುವ ಎರಡು ಉಪಗ್ರಹಗಳನ್ನು 3 ಮೀಟರ್‌ ಅಂತರಕ್ಕೆ ತಂದು ಜೋಡಣೆಯ ಪ್ರಾಯೋಗಿಕ ಪ್ರಯತ್ನ ನಡೆಸಲಾಗಿದೆ. ನಂತರ ನೌಕೆಗಳನ್ನು ಸುರಕ್ಷಿತವಾಗಿ ಹಿಂದಕ್ಕೆ ಸರಿಸಿ ಕಾರ್ಯಾಚರಣೆಯ ದತ್ತಾಂಶ ವಿಶ್ಲೇಷಿಸಿದ ನಂತರ ಡಾಕಿಂಗ್‌ ಪ್ರಕ್ರಿಯೆ ಮಾಡಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.

ಸಣ್ಣ ಬಾಹ್ಯಾಕಾಶ ನೌಕೆಗಳನ್ನು ಬಳಸಿಕೊಂಡು ಜೋಡಣೆ ಮಾಡುವ ಈ ಪ್ರಯೋಗವು ಭವಿಷ್ಯದಲ್ಲಿ ಕಡಿಮೆ ವೆಚ್ಚದಲ್ಲಿ ಉನ್ನತ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಮಿಷನ್‌ಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಮಿಷನ್‌ ಉದ್ದೇಶಗಳನ್ನು ಸಾಧಿಸಲು ಬಹು ರಾಕೆಟ್‌ ಉಡಾವಣೆಗಳ ಅಗತ್ಯವಿರುವಾಗ ಬಾಹ್ಯಾಕಾಶದಲ್ಲಿ ಡಾಕಿಂಗ್‌ ತಂತ್ರಜ್ಞಾನವು ತುಂಬಾ ಮುಖ್ಯವಾಗಿರುತ್ತದೆ. ಇದನ್ನು ಸಾಧಿಸಲು ಈ ಯೋಜನೆ ಪ್ರಮುಖವಾಗಿದೆ ಎಂದು ಇಸ್ರೋ ಹೇಳಿದೆ.

ಸ್ಪಾಡೆಕ್ಸ್‌ ಮಿಷನ್‌ನ ಪ್ರಾಥಮಿಕ ಉದ್ದೇಶವು ಕಡಿಮೆ ಅಂತರವಿರುವ ಭೂಮಿಯ ವೃತ್ತಾಕಾರದ ಕಕ್ಷೆಯಲ್ಲಿ ಎರಡು ಸಣ್ಣ ಬಾಹ್ಯಾಕಾಶ ನೌಕೆಗಳ (SDX01-ಚೇಸರ್‌ ಮತ್ತು SDX02-ಟಾರ್ಗೆಟ್‌) ಸಂಧಿಸುವಿಕೆ, ಡಾಕಿಂಗ್‌, ಅನ್‌ಡಾಕಿಂಗ್‌ಗೆ ಅಗತ್ಯವಿರುವ ತಂತ್ರಜ್ಞಾನ ಅಭಿವೃದ್ದಿಪಡಿಸುವುದಾಗಿದೆ. ಡಾಕಿಂಗ್‌ ಮಾಡಿದ ನೌಕೆಯ ನಡುವೆ ವಿದ್ಯುತ್‌ ಶಕ್ತಿ ವರ್ಗಾವಣೆ ಆಗುತ್ತದೆಯೇ ಎಂಬುವುದನ್ನು ತಿಳಿಯುವ ಉದ್ದೇಶವಿದೆ. ಬಾಹ್ಯಾಕಾಶದಲ್ಲಿ ರೋಬೋಟಿಕ್ಸ್‌, ಸಂಯೋಜಿತ ಬಾಹ್ಯಾಕಾಶ ನೌಕೆ ನಿಯಂತ್ರಣ ಮತ್ತು ಅನ್‌ಡಾಕ್‌ ಮಾಡಿದ ನಂತರ ಪೆಲೋಡ್‌ ಕಾರ್ಯಾಚರಣೆಗಳ ಭವಿಷ್ಯ ಯೋಜನೆಗಳಿಗೆ ಇದು ಸಹಕಾರಿಯಾಗಲಿದೆ.

ಇನ್ನು ಈ ಯೋಜನೆಯು ಬಾಹ್ಯಾಕಾಶದ ಹಲವಾರು ಮಿಷನ್‌ಗಳಿಗೆ ಗಗನಯಾತ್ರಿಗಳನ್ನು ಇಳಿಸುವ ಭವಿಷ್ಯದ ಕಾರ್ಯಾಚರಣೆಗಳಿಗೆ ನಿರ್ಣಾಯಕ ತಂತ್ರಜ್ಞಾನ ಒದಗಿಸಲು ದೇಶಕ್ಕೆ ನೆರವಾಗಲಿದೆ ಎಂದು ಇಸ್ರೋ ತಿಳಿಸಿದೆ.

 

Tags:
error: Content is protected !!