ಟೆಹರಾನ್: ಇರಾನ್ ಸಂಘರ್ಷ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಅಮೇರಿಕಾದ ಶ್ವೇತಭವನದ ಹೇಳಿಕೆಗಳನ್ನು ಗಮನಿಸಿದರೆ, ಈ ಯುದ್ಧದ ಅಂತ್ಯ ಯಾವಾಗ ಎನ್ನುವುದು ಇರಲಿ ಅದರ ಅಸಲಿ ಗುರಿ ಏನು ಎನ್ನುವುದೇ ದಿನ ದಿನಕ್ಕೆ ಬದಲಾಗುವುದು ಕಾಣುತ್ತದೆ.
ಈ ಕದನದ ಆದಿಯಿಂದಲೂ ಅಧ್ಯಕ್ಷ ಟ್ರಂಪ್ ಮತ್ತು ಅವರ ಆಡಳಿತ ದಿನಕ್ಕೊಂದು ವಾದ ಮಂಡಿಸುತ್ತಿದೆ. ಮೊದಲು, ಟ್ರಂಪ್ ಇರಾನ್ ಮೇಲಿನ ದಾಳಿಯನ್ನು ಇದು ಅಣುಬಾಂಬ್ ತಡೆಯುವ ಪ್ರಯತ್ನ ಎಂದಿದ್ದರು. ನಂತರ, ಖಮೇನಿ ಹತ್ಯೆಯಾದ ಮೇಲೆ ಆಡಳಿತ ಬದಲಾವಣೆಯೇ ನಮ್ಮ ಗುರಿ ಎಂದರು. ಈಗ ಅಂತರ ರಾಷ್ಟ್ರೀಯ ತೈಲ ಮಾರುಕಟ್ಟೆಯನ್ನು ಉಳಿಸುವ ವಿಚಾರ ಮಾತನಾಡುತ್ತಿದ್ದಾರೆ.
ಕಾಲಮಿತಿಯ ವಿಷಯದಲ್ಲೂ ಇದೇ ಗೊಂದಲ. ಕಳೆದ ವಾರ “ಯುದ್ಧ ಮುಗಿಯಲು ನಾಲ್ಕರಿಂದ ಐದು ವಾರ” ಬೇಕು ಎಂದಿದ್ದ ಟ್ರಂಪ್, ಸೋಮವಾರದ ಹೊತ್ತಿಗೆ “ಯುದ್ಧ ಬಹುತೇಕ ಮುಗಿದಿದೆ” ಎಂದಿದ್ದಾರೆ. ಆದರೆ ಅದೇ ಸಮಯದಲ್ಲಿ ಅಮೆರಿಕದ ರಕ್ಷಣಾ ಇಲಖೆ, ಇರಾನ್ ಮೇಲಿನ ದಾಳಿ ಮತ್ತಷ್ಟು ತೀವ್ರಗೊಳಿಸುವ ಮಾತನ್ನಾಡುತ್ತಿದೆ.
ಈ ಬದಲಾಗುತ್ತಿರುವ ನಿಲುವುಗಳು ಮತ್ತು ಮೈಲಿಗಲ್ಲುಗಳು ಇಡೀ ಜಗತ್ತನ್ನು ಆತಂಕಕ್ಕೆ ತಳ್ಳಿವೆ. ಯುದ್ಧ ಬಹುಮಟ್ಟಿಗೆ ಮುಗಿದಿದೆ ನಾವೇ ಗೆದ್ದಿದ್ದೇವೆ ಎಂದು ಒಂದು ಕಡೆ ಹೇಳುವವರೇ, ಮತ್ತೊಂದೆಡೆ ಅಂತರಾಷ್ಟ್ರೀಯ ತೈಲ ಸಾಗಣೆಯನ್ನು ಇರಾನ್ ತಡೆದರೆ ಅದರ ಮೇಲೆ 20 ಪಟ್ಟು ಹೆಚ್ಚು ದಾಳಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ.
ಈ ಗೊಂದಲದ ಹಾದಿ ಎಲ್ಲಿಗೆ ಹೋಗಿ ಮುಟ್ಟುತ್ತದೋ ಕಾದು ನೋಡಬೇಕು.





