ಮುಂಬೈ: ಬಿಸಿಸಿಐ 2025ರ ಐಪಿಎಲ್ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಗೊಳಿಸಿದ್ದು, ಉದ್ಘಾಟನಾ ಪಂದ್ಯದಲ್ಲಿಯೇ ಆರ್‌ಸಿಬಿ ಮತ್ತು ಹಾಲಿ ಚಾಂಪಿಯನ್ ಆಗಿರುವ ಕೆಕೆಆರ್ ಮುಖಾಮುಖಿಯಾಗಲಿವೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇಂದು(ಫೆಬ್ರವರಿ.16) ಬಹುನಿರೀಕ್ಷಿತ ಐಪಿಎಲ್‌ನ 18ನೇ ಆವೃತ್ತಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. 20205ರ ಐಪಿಎಲ್ ಟೂರ್ನಿಯೂ ಮಾರ್ಚ್.22 ರಿಂದ ಪ್ರಾರಂಭವಾಗಲಿದ್ದು, ಮೊದಲನೇ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಇಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದಿಂದಲೇ ಐಪಿಎಲ್ ಉದ್ಘಾಟನೆಯಾಗಲಿದೆ.
ಈ ಬಾರಿಯ ಐಪಿಎಲ್ ಟೂರ್ನಿ ಮಾರ್ಚ್.22 ರಿಂದ ಮೇ.25ರವರೆಗೂ ನಡೆಯಲಿದೆ. ಒಟ್ಟು 13 ತಾಣಗಳಲ್ಲಿ 74 ಪಂದ್ಯಗಳು ನಿಗಧಿಯಾಗಿವೆ. ಅಲ್ಲದೇ 12 ಡಬಲ್ ಹೆಡರ್ (ದಿನಕ್ಕೆ 2 ಪಂದ್ಯ) ಪಂದ್ಯಗಳು ಇರಲಿದ್ದು, ಡಬಲ್ ಹೆಡರ್ ಇದ್ದಂತಹ ವೇಳೆ ಮಧ್ಯಾಹ್ನ 3.30ಕ್ಕೆ ಮೊದಲ ಪಂದ್ಯ ಮತ್ತು ರಾತ್ರಿ 7.30ಕ್ಕೆ 2ನೇ ಪಂದ್ಯ ಪ್ರಾರಂಭವಾಗಲಿದೆ.
ಇನ್ನು ಪ್ಲೇ-ಆಫ್ ಪಂದ್ಯಗಳಿಗೆ ಹೈದರಾಬಾದ್ ಮತ್ತು ಕೋಲ್ಕತ್ತಾ ತಾಣಗಳು ಆತಿಥ್ಯ ವಹಿಸಲಿವೆ. ಮೇ.20 ರಂದು ಹೈದರಾಬಾದ್‌ನಲ್ಲಿ ಮೊದಲ ಕ್ವಾಲಿಫೈಯರ್ ಹಾಗೂ ಮೇ.21ರಂದು ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ. ಅಲ್ಲದೇ ಮೇ.23 ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ 2ನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಮೇ.25 ರಂದು ಕೋಲ್ಕತ್ತಾದಲ್ಲೇ ಫೈನಲ್ ಪಂದ್ಯ ನಡೆಯಲಿದೆ.





