ಹೊಸದಿಲ್ಲಿ: ಭಾರತದ ಯೂರಿಯಾ ಘಟಕಗಳು ಅರ್ಧದಷ್ಟು ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಮೂಲಗಳು ಹೇಳಿವೆ. ಪಶ್ಚಿಮ ಏಷ್ಯಾದಲ್ಲಿನ ಯುದ್ಧವು ಹೊರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆಗೆ ಅಡ್ಡಿ ಸೃಷ್ಟಿಸಿದೆ, ಇದರಿಂದಾಗಿ ಹಲವು ಕಂಪನಿಗಳು ಎಲ್‌ಎನ್‌ಜಿ ಪೂರೈಕೆ ವಿಚಾರದಲ್ಲಿ ಗುತ್ತಿಗೆ ಒಪ್ಪಂದಗಳಿಗೆ ಅನುಗುಣವಾಗಿ ನಡೆದುಕೊಳ್ಳಲು ಆಗದು ಎಂದು ಹೇಳಿವೆ. ಇದು ಎಲ್‌ಎನ್‌ಜಿ ಪೂರೈಕೆ ಮೇಲೆ ಪರಿಣಾಮ ಬೀರಿದೆ.
ಪೆಟ್ರೊನೆಟ್ ಎಲ್‌ಎನ್‌ಜಿ ಕಂಪನಿಯು ದೇಶಕ್ಕೆ ಪೂರೈಕೆ ಆಗುವ ಎಲ್‌ಎನ್‌ಜಿ ಸ್ವೀಕರಿಸುವ ಅತಿದೊಡ್ಡ ಟರ್ಮಿನಲ್ ನಿರ್ವಹಣೆ ಮಾಡುತ್ತಿದೆ. ಜಲಸಂಧಿಯಲ್ಲಿ ಸೃಷ್ಟಿಯಾಗಿರುವ ಅಡ್ಡಿಯ ಕಾರಣದಿಂದಾಗಿ, ಈ ಕಂಪನಿಗೆ ಎಲ್‌ಎನ್‌ಜಿ ಪೂರೈಕೆ ಮಾಡುವವರು ಪೂರೈಕೆ ಕಷ್ಟ ಎಂದು ಹೇಳಿದ್ದಾರೆ. ಹೀಗಾಗಿ ಪೆಟ್ರೊನೆಟ್ ಎಲ್‌ಎನ್‌ಜಿ ಕೂಡ ತನ್ನಿಂದ ಗುತ್ತಿಗೆ ಒಪ್ಪಂದಗಳಿಗೆ ಅನುಗುಣವಾಗಿ ನಡೆದುಕೊಳ್ಳಲು ಆಗದು ಎಂದು ತಿಳಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಇದರಿಂದಾಗಿ ಸರ್ಕಾರಿ ಸ್ವಾಮ್ಯದ ಗೇಲ್ ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಅನಿಲ ಪೂರೈಕೆಯನ್ನು ಕಡಿಮೆ ಮಾಡಿವೆ. ಈ ಕಂಪನಿಗಳು ದೇಶದಾದ್ಯಂತ ಇರುವ ರಸಗೊಬ್ಬರ ಘಟಕಗಳಿಗೆ ಅನಿಲ ಸರಬರಾಜು ಮಾಡುತ್ತವೆ.‘ಪರಿಸ್ಥಿತಿ ಸಹಜವಾಗಿದ್ದ ಮಟ್ಟಕ್ಕೆ ಹೋಲಿಸಿದರೆ ಈಗ ಅನಿಲ ಪೂರೈಕೆಯು ಶೇ 60ರಿಂದ ಶೇ.65ರಷ್ಟು ಮಾತ್ರ ಇದೆ’ ಎಂದು ಉದ್ಯಮದ ಮೂಲಗಳು ಹೇಳಿವೆ. ಇದರಿಂದಾಗಿ ಯೂರಿಯಾ ಉತ್ಪಾದನೆಯು ಘಟಕಗಳಲ್ಲಿ ಸರಿಸುಮಾರು ಶೇ.50ರಷ್ಟು ಕಡಿಮೆ ಆಗಿದೆ.





