ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಭಾರತ ಸರ್ಕಾರ ಪ್ರತೀಕಾರ ತೀರಿಸಿಕೊಂಡಿದ್ದು, ನೆರೆಯ ದೇಶ ಪಾಕಿಸ್ತಾನಕ್ಕೆ ಮರ್ಮಾಘಾತ ಕೊಟ್ಟಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭದ್ರತೆ ಕುರಿತು ಸಂಪುಟ ಸಮಿತಿ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಅಮಿತ್ ಶಾ, ವಿದೇಶಾಂಗ ಸಚಿವ ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.
ಸಭೆಯಲ್ಲಿ ಪಾಕ್ ವಿರುದ್ಧ ಭಾರತ ಸರ್ಕಾರವು ರಾಜತಾಂತ್ರಿಕ ಯುದ್ಧ ಸಾರಿದ್ದು, ಪಾಕ್ ನಾಗರಿಕರು ದೇಶ ಬಿಡಲು 48 ಗಂಟೆ ಗಡುವು ನೀಡಲಾಗಿದೆ. ಸಿಂಧೂ ನದಿ ಒಪ್ಪಂದ ಅಂತ್ಯಗೊಳಿಸಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದ್ದು, ಪಾಕ್ ರಾಜತಾಂತ್ರಿಕ ಅಧಿಕಾರಿಗಳಿಗೆ ಗೇಟ್‌ಪಾಸ್ ನೀಡಲಾಗಿದೆ.
ಇನ್ನು ಅಟಾರಿ-ವಾಘಾ ಗಡಿ ಬಂದ್ ಮಾಡಲು ನಿರ್ಧಾರ ಮಾಡಲಾಗಿದ್ದು, ಪಾಕಿಸ್ತಾನದ ಪ್ರಜೆಗಳಿಗೆ ವಿಸಾ ನೀಡದಿರಲು ಭಾರತ ಸರ್ಕಾರ ನಿರ್ಧಾರ ಮಾಡಿದೆ. ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ಕರೆಸಿಕೊಳ್ಳಲು ನಿರ್ಧಾರ ಮಾಡಲಾಗಿದೆ.
ಭಾರತದಲ್ಲಿರುವ ಪಾಕಿಸ್ತಾನ ರಾಯಭಾರಿಯನ್ನು ಗಡಿಪಾರು ಮಾಡಲು ನಿರ್ಧಾರ ಮಾಡಿದ್ದು, ಈ ಮೂಲಕ ಪಾಕಿಸ್ತಾನಕ್ಕೆ ಭಾರತ ಸರ್ಕಾರ ಮರ್ಮಾಘಾತ ನೀಡಿದೆ.





