Mysore
21
overcast clouds
Light
Dark

ಜಾಗತಿಕ ಆಹಾರ ಮತ್ತು ಪೌಷ್ಠಿಕತೆಯ ಭದ್ರತೆಗೆ ಮಾರ್ಗೋಪಾಯ ಹುಡುಕುವ ಕೆಲಸ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಭಾರತ ಅತೀಹೆಚ್ಚು ಪ್ರಮಾಣದಲ್ಲಿ ಆಹಾರ ಪದಾರ್ಥಗಳನ್ನು ಉತ್ಪಾದಿಸುವ ರಾಷ್ಟ್ರವಾಗಿದೆ. ಹಾಗಾಗಿ ಜಾಗತಿಕ ಆಹಾರ ಮತ್ತು ಪೌಷ್ಠಿಕತೆಯ ಭದ್ರತೆಗೆ ಮಾರ್ಗೋಪಾಯ ಹುಡುಕುವ ಕೆಲಸ ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಬಗ್ಗೆ 32ನೇ ಕೃಷಿ ಅರ್ಥಶಾಸ್ತ್ರಜ್ಞರ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, 2024-25ನೇ ಸಾಲಿನ ಬಜೆಟ್‌ನಲ್ಲಿ ಸುಸ್ಥಿರ ಕೃಷಿ ಮತ್ತು ಹವಾಮಾನ ಆಧಾರಿತ ಕೃಷಿ ಚಟುವಟಿಕೆಗಳಿಗೆ ಒತ್ತು ನೀಡಲಾಗಿದೆ ಎಂದರು.

ಭಾರತ ಮೊದಲು ಕೃಷಿ ಮತ್ತು ಆಹಾರ ಭದ್ರತೆಯ ಸವಾಲುಗಳನ್ನು ಎದುರಿಸುತ್ತಿತ್ತು. ಪ್ರಸ್ತುತ ಹಾಲು, ಬೇಳೆಕಾಳು ಮತ್ತು ಸಾಂಬಾರು ಪದಾರ್ಥಗಳ ಉತ್ಪಾದನೆಯಲ್ಲಿ ಭಾರತ ಭಾರೀ ಮುಂಚೂಣಿಯಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಆಹಾರ ಧಾನ್ಯಗಳು, ಹಣ್ಣುಗಳು, ತರಕಾರಿ, ಹತ್ತಿ, ಸಕ್ಕರೆ ಮತ್ತು ಚಹಾ ಉತ್ಪಾದನೆಯಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ ಎರಡನೇ ಅತಿದೊಡ್ಡ ರಾಷ್ಟ್ರವಾಗಿದೆ ಎಂದರು.

ಆದ್ದರಿಂದಲೇ ಕೇಂದ್ರ ಬಜೆಟ್‌ನಲ್ಲಿ ಕೃಷಿಗೆ ಹೆಚ್ಚು ಒತ್ತು ನೀಡಲಾಗಿದೆ. ಸಾಂಬಾರು ಪದಾರ್ಥಗಳ ಉತ್ಪಾದನೆಯಲ್ಲಿ ಭಾರತ ಇನ್ನೂ ಹೆಚ್ಚಿನ ಗುರಿ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.