ಹೊಸದಿಲ್ಲಿ : ವರದಕ್ಷಿಣೆ ಹಣಕ್ಕಾಗಿ ಕುಟುಂಬವೊಂದು ಮಹಿಳೆಯನ್ನು ಆಕೆಯ ಸಹೋದರಿ ಮತ್ತು ಮಗನ ಕಣ್ಣೆದುರಿನಲ್ಲೇ ಹಲ್ಲೆ ಮಾಡಿ, ಕೂದಲು ಹಿಡಿದು ಎಳೆದಾಡಿ ಬೆಂಕಿ ಹಚ್ಚಿ ಕೊಂದ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಪತಿಯಿಂದ ಬೆಂಕಿ ಹಚ್ಚಲ್ಪಟ್ಟ ಮಹಿಳೆಯ ಆರು ವರ್ಷದ ಮಗ, ತನ್ನ ತಂದೆ ತನ್ನ ತಾಯಿಯನ್ನು ತನ್ನ ಮುಂದೆಯೇ ಕೊಂದಿದ್ದಾನೆ ಎಂದು ಬಹಿರಂಗಪಡಿಸಿದ್ದು, ಆಕೆಯ ಸಾವಿಗೆ ಕಾರಣವಾದ ದೌರ್ಜನ್ಯವನ್ನು ವಿವರಿಸಿದ್ದಾನೆ.
ಆ ಭಯಾನಕ ಘಟನೆಯನ್ನು ವಿವರಿಸಿರುವ ಬಾಲಕ ತನ್ನ ತಂದೆ ಮತ್ತು ಅಜ್ಜಿ ತನ್ನ ತಾಯಿಯ ಮೇಲೆ ಒಂದು ವಸ್ತುವನ್ನು ಸುರಿದು, ಕಪಾಳಮೋಕ್ಷ ಮಾಡಿ, ನಂತರ ಬೆಂಕಿ ಹಚ್ಚಿದರು ಎಂದು ಹೇಳಿಕೊಂಡಿದ್ದಾನೆ.
ʻಮೇರಿ ಮಮ್ಮಾ ಕೆ ಉಪರ್ ಕುಚ್ ದಲಾ, ಫಿರ್ ಉಂಕೋ ಚಾಂತ ಮಾರಾ ಫಿರ್ ಲೈಟರ್ ಸೆ ಆಗ್ ಲಗಾ ದಿ. (ಅವರು ನನ್ನ ತಾಯಿಯ ಮೇಲೆ ಏನೋ ಸುರಿದು, ಅವರಿಗೆ ಕಪಾಳಮೋಕ್ಷ ಮಾಡಿ, ಲೈಟರ್ ಬಳಸಿ ಬೆಂಕಿ ಹಚ್ಚಿದರು)ʼ ಎಂಬುದನ್ನು ಬಹಿರಂಗಪಡಿಸಿದ್ದಾನೆ.
ಮಾಧ್ಯಮದ ಯಾರೋ ಒಬ್ಬರು ತನ್ನ ತಂದೆ ಅವಳನ್ನು ಕೊಲೆ ಮಾಡಿದ್ದಾರಾ ಎಂದು ಕೇಳಿದಾಗ ಪರೋಕ್ಷವಾಗಿ ಒಪ್ಪಿಕೊಂಡಿದ್ದಾನೆ. ಈ ಭಯಾನಕ ಘಟನೆಯ ಎರಡು ವೀಡಿಯೊಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ಒಂದು ವೀಡಿಯೊದಲ್ಲಿ, ಪುರುಷ ಮತ್ತು ಮಹಿಳೆಯೊಬ್ಬರು ಮಹಿಳೆಯ ಮೇಲೆ ಹಲ್ಲೆ ಮಾಡಿ ಆಕೆಯ ಕೂದಲನ್ನು ಹಿಡಿದು ಮನೆಯಿಂದ ಹೊರಗೆ ಹೋಗುವುದನ್ನು ಕಾಣಬಹುದು. ಇನ್ನೊಂದು ವೀಡಿಯೊದಲ್ಲಿ ಮಹಿಳೆ ಬೆಂಕಿ ಹಚ್ಚಿದ ನಂತರ ಮೆಟ್ಟಿಲುಗಳ ಕೆಳಗೆ ಕುಂಟುತ್ತಾ ಇಳಿಯುವುದನ್ನು ಸೆರೆಯಾಗಿದೆ.
ಗ್ರೇಟರ್ ನೋಯ್ಡಾದ ಕಸ್ನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿರ್ಸಾ ಗ್ರಾಮದಲ್ಲಿ ನಡೆದ ಘಟನೆಯ ವಿಡಿಯೋವನ್ನು ನಿಕ್ಕಿ ಎಂದು ಗುರುತಿಸಲಾದ ಮಹಿಳೆಯ ಅಕ್ಕ ಕಾಂಚನ್ ಸೆರೆಹಿಡಿದಿದ್ದಾರೆ.
ಮಾಧ್ಯಮಗಳ ಮುಂದೆ ಮಾತನಾಡಿದ ಕಾಂಚನ್, ೩೬ ಲಕ್ಷ ರೂ. ವರದಕ್ಷಿಣೆ ಬೇಡಿಕೆಯನ್ನು ಪೂರೈಸದ ಕಾರಣ ತನ್ನ ತಂಗಿಯನ್ನು ಪತಿ ವಿಪಿನ್ ಮತ್ತು ಅತ್ತೆ ಮಾವಂದಿರು ಕೊಂದಿದ್ದಾರೆ. ಗುರುವಾರ ರಾತ್ರಿ, ಆಕೆಯನ್ನು ತೀವ್ರವಾಗಿ ಥಳಿಸಿ ಬೆಂಕಿ ಹಚ್ಚಲಾಗಿದೆ ಎಂದು ವಿಪಿನ್ ಸಹೋದರನನ್ನು ಮದುವೆಯಾಗಿರುವ ಕಾಂಚನ್ ಆರೋಪಿಸಿದ್ದಾರೆ.
ಮದುವೆಯ ನಂತರ, ಅವರು ೩೫ ಲಕ್ಷ ರೂ. ಬೇಡಿಕೆ ಇಟ್ಟರು. ನಾವು ಅವರಿಗೆ ಮತ್ತೊಂದು ಕಾರನ್ನು ಸಹ ನೀಡಿದ್ದೇವೆ, ಆದರೆ ಅವರ ಬೇಡಿಕೆಗಳು ಮತ್ತು ಕಿರುಕುಳ ನಿರಂತರವಾಗಿ ಮುಂದುವರಿದಿತ್ತು ಎಂದು ಹೇಳಿದ್ದಾರೆ.





