ಅಹಮದಾಬಾದ್ : ಏರ್ ಇಂಡಿಯಾ ವಿಮಾನ ಪತನಗೊಂಡು 241 ಜನರು ಅಸುನೀಗಿದ್ದಾರೆ. ಈ ದಾರುಣ ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಹೃದಯ ವಿದ್ರಾವಕ ಕಥೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಈ ಕಥೆಗಳು ಎಲ್ಲರ ಮನ ಕುಲುಕುತ್ತಿವೆ.
ಮೃತ ಹೆಂಡತಿಯ ಅಸ್ತಿಯನ್ನು ಆಕೆಯ ಇಚ್ಛೆಯಂತೆಯೇ ನರ್ಮದಾ ನದಿಯಲ್ಲಿ ವಿಸರ್ಜಿಸಲು ಬಂದಿದ್ದ ಅರ್ಜುನ್ ಪಟೋಲಿಯಾ ಅವರು ವಿಮಾನ ದುರಂತದಲ್ಲಿ ಸುಟ್ಟು ಬುದಿಯಾದ ಹೃದಯ ವಿದ್ರಾವಕ ಘಟನೆ ನಡೆದಿದೆ. ದಂಪತಿ ನಾಲ್ಕು ಮತ್ತು ಎಂಟು ವರ್ಷದ ಹೆಣ್ಣುಮಕ್ಕಳು ಈಗ ಅನಾಥರಾಗಿದ್ದಾರೆ.
ಅನಾರೋಗ್ಯದ ಕಾರಣ ಎರಡು ವಾರಗಳ ಹಿಂದಷ್ಟೇ ಅರ್ಜುನ್ ಅವರ ಪತ್ನಿ ಭಾರತಿ ಅವರು ಲಂಡನ್‌ನಲ್ಲಿ ಮೃತಪಟ್ಟಿದ್ದರು. ಮೃತ ಅರ್ಜುನ್ ದಂಪತಿ ಹಲವು ವರ್ಷಗಳಿಂದ ಲಂಡನ್‌ನಲ್ಲಿ ವಾಸವಿದ್ದರು. ಸದ್ಯ ಮೃತ ದಂಪತಿಯ ಇಬ್ಬರು ಮಕ್ಕಳು ಹತ್ತಿರದ ಸಂಬಂಧಿಕರ ಮನೆಯಲ್ಲಿದ್ದಾರೆ ಎಂದು ಅರ್ಜುನ್ ಅವರ ಸಹೋದರ ತಿಳಿಸಿದರು.





