ನವದೆಹಲಿ: ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
96 ವರ್ಷ ವಯಸ್ಸಿನ ಅವರು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದು, ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.
ದೆಹಲಿ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಅಡ್ವಾಣಿ ಅವರನ್ನು ಆಸ್ಪತ್ರೆಯೆ ಡಾ.ವಿನೀಶ್ ಸೂರಿ ಎಂಬುವವರು ಆರೈಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಡ್ವಾಣಿ ಅವರು ಬಿಜೆಪಿ ಪಕ್ಷವನ್ನು ಕಟ್ಟಿದ್ದಲ್ಲದೇ ಆ ಪಕ್ಷವನ್ನು ಗಟ್ಟಿಗೊಳಿಸಿದವರಲ್ಲಿ ಬಹಳ ಹಿರಿಯರು. ಈ ಎಲ್ಲಾ ಸಾಧನೆಗಳಿಂದ ಅವರಿಗೆ ಭಾರತ ರತ್ನ ಪ್ರಶಸ್ತಿ ಕೂಡ ಲಭಿಸಿದೆ. ಅಡ್ವಾಣಿ ಜೊತೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೂಡ ಬಿಜೆಪಿಯನ್ನು ಪ್ರಬಲ ರಾಷ್ಟ್ರೀಯ ಪಕ್ಷವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇನ್ನು ಅಯೋಧ್ಯೆ ರಾಮಮಂದಿರಕ್ಕಾಗಿ ಚಳುವಳಿಯ ನೇತೃತ್ವ ವಹಿಸಿದವರಲ್ಲಿ ಅಡ್ವಾಣಿ ಮೊದಲಿಗರಾಗಿದ್ದು, ರಾಮಮಂದಿರ ನಿರ್ಮಿಸಲು ಅವರ ಪಾತ್ರ ಬಹಳ ಪ್ರಮುಖವಾಗಿದೆ.
ಈಗ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಗೆ ಬಿಜೆಪಿ ನಾಯಕರು ಭೇಟಿ ನೀಡಿ ಅಡ್ವಾಣಿ ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ.