ನವದೆಹಲಿ: ಜಗತ್ತಿಗೆ ಕೋವಿಡ್-19 ಎನ್ನುವ ವೈರಸ್ ಕೊಟ್ಟು ಜಗತ್ತನ್ನೇ ಕಷ್ಟಕ್ಕೆ ಸಿಲುಕುವಂತೆ ಮಾಡಿದ್ದ ಚೀನಾದಲ್ಲಿ ಇದೀಗ ಹೊಸ ವೈರಸ್ ಕಾಣಿಸಿಕೊಂಡಿದ್ದು, ಚೀನಾದಲ್ಲಿ ತುರ್ತು ಸ್ಥಿತಿ ಉಂಟಾಗುವಂತೆ ಮಾಡಿದೆ. ಚೀನಾದ ಪರಿಸ್ಥಿತಿ ನೋಡಿ ಇತರೆ ದೇಶಗಳು ಕೂಡ ಆತಂಕಗೊಂಡಿವೆ. ಚೀನಾದಲ್ಲಿ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ ಭಾರತದಲ್ಲಿ ಕೂಡ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.
ಚೀನಾದಲ್ಲಿ ಎಚ್‍ಎಂಪಿವಿ ಹರಡುತ್ತಿದ್ದು ಭಾರತೀಯರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ನಿಭಾಯಿಸಲು ನಾವು ಸಿದ್ದವಾಗಿದ್ದೇವೆ, ಚೀನಾದಲ್ಲಿ ಇರುವ ಪರಿಸ್ಥಿತಿ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದೆ.
ಕಳೆದ ಕೆಲವು ವಾರಗಳಲ್ಲಿ ಚೀನಾದಲ್ಲಿ ಉಸಿರಾಟದ ಕಾಯಿಲೆ ಪ್ರಕರಣಗಳು ಹೆಚ್ಚುತ್ತಿರುವ ನಡುವೆ ದೆಹಲಿಯಲ್ಲಿ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ ಎಂದು ಕೇಂದ್ರ ಮಾಹಿತಿ ನೀಡಿದೆ.
ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಚೀನಾದಲ್ಲಿ ಈಗ ಇರುವ ಪರಿಸ್ಥಿತಿ ವಿಶೇಷವೇನಲ್ಲ. ಈ ಕಾಲದಲ್ಲಿ ಅಲ್ಲಿ ಉಸಿರಾಟ, ಆರೋಗ್ಯ ಸಮಸ್ಯೆ ಸಾಮಾನ್ಯ ಎನ್ನುವ ಅಭಿಪ್ರಾಯಕ್ಕೆ ಬರಲಾಗಿದೆ. ಇನ್ಪ್ಲುಯೆನ್ಸ್ ವೈರಸ್, ಆರ್‌ಎಸ್ವಿ, ಎಚ್‍ಎಂಪಿವಿ ವೈರಸ್‌ಗಳು ಸಾಮಾನ್ಯ ಎಂದು ತಿಳಿಸಿದೆ.





