ಚೆನ್ನೈ: ಫೆಂಗಲ್ ಚಂಡಮಾರುತದಿಂದ ಚೇತರಿಸಿಕೊಳ್ಳುವ ಮುನ್ನವೇ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ.
ಇದರಿಂದ ತಮಿಳುನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಚೆನ್ನೈ, ಕಾಂಚೀಪುರಂ ಮತ್ತು ತಿರುವಳ್ಳೂರ್ ಪ್ರದೇಶಗಳಲ್ಲಿ ಕಳೆದ ರಾತ್ರಿಯಿಂದ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ನೀಡಿ ಆದೇಶ ಹೊರಡಿಸಲಾಗಿದೆ.
ಮುಂದಿನ ಎರಡು ದಿನಗಳ ಕಾಲ ತಮಿಳುನಾಡಿನಾದ್ಯಂತ ಧಾರಾಕಾರ ಮಳೆಯಾಗಲಿದ್ದು, ಜನತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಇನ್ನು ಭಾರೀ ಮಳೆಯಿಂದ ವಾಹನ ಸವಾರರ ಗೋಳು ಹೇಳತೀರದಾಗಿದ್ದು, ರಸ್ತೆಗಳಲ್ಲಿ ಮಳೆ ನೀರು ನದಿಯಂತೆ ಹರಿಯುತ್ತಿದೆ. ಇನ್ನು ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಚಳಿಯ ವಾತಾವರಣ ನಿರ್ಮಾಣವಾಗಿದ್ದು, ಮನೆಯಿಂದ ಹೊರಬರಲು ಆಗದ ಸ್ಥಿತಿ ಉಂಟಾಗಿದೆ.





