ಮುಂಬೈ: ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳು ಸಂಪೂರ್ಣ ಮುಳುಗಿ ಹೋಗಿವೆ. ಮುಂಬೈನ ಲೋಕಲ್ ಟ್ರೈನ್ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.
ಮಹಾಮಳೆಗೆ ವಾಣಿಜ್ಯ ನಗರಿ ಮುಂಬೈ ಮುಳುಗಿದ್ದು, ವರ್ಲಿ, ಥಾಣೆ ಸೇರಿದಂತೆ ಹಲವು ಪ್ರದೇಶಗಳಿಗೆ ಜಲದಿಗ್ಬಂಧನ ಹಾಕಲಾಗಿದೆ. ಭಾರೀ ಮಳೆಯಿಂದ ಬೈಕ್‌ಗಳು ನೀರಿನಲ್ಲಿ ಕೊಚ್ಚಿಹೋಗಿದ್ದು, ಜನ ತತ್ತರಿಸಿ ಹೋಗಿದ್ದಾರೆ. ಮುಂಬೈನ ಹಲವು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಆರು ಗಂಟೆಗಳಲ್ಲಿ ಮಹಾನಗರಿ ಮುಂಬೈನಲ್ಲಿ ದಾಖಲೆ ಮಳೆಯಾಗಿದೆ ಎಂದು ತಿಳಿದುಬಂದಿದೆ. ಆರು ಗಂಟೆಗಳಲ್ಲಿ ೩೦೦ ಮಿ.ಮೀಗಿಂತಲೂ ಅಧಿಕ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇನ್ನೂ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮುಂಬೈ ನಗರದಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅಗತ್ಯವಿದ್ದರಷ್ಟೇ ಜನರು ಮನೆಯಿಂದ ಹೊರಬರಬೇಕು. ಇಲ್ಲದಿದ್ದರೆ ಮಕ್ಕಳನ್ನು ಹೊರಗೆ ಕಳುಹಿಸಬೇಡಿ ಎಂದು ಸೂಚನೆ ನೀಡಿದ್ದು, ಮಹಾಮಳೆಯಿಂದ ಜನರು ಹೈರಾಣಾಗಿದ್ದಾರೆ.