ನವದೆಹಲಿ: ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್.ಪಾಟೀಲ್ ಅವರೊಂದಿಗೆ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಚರ್ಚೆ ನಡೆಸಿದ್ದಾರೆ.
ನವದೆಹಲಿಯ ತಮ್ಮ ನಿವಾಸದಲ್ಲಿ ಕೇಂದ್ರ ಸಚಿವರ ಜತೆ ಮುಖ್ಯವಾಗಿ ಮಾತುಕತೆ ನಡೆಸಿದ ಮಾಜಿ ಪ್ರಧಾನಿ ದೇವೇಗೌಡರು, ರಾಜ್ಯಕ್ಕೆ ಸಂಬಂಧಪಟ್ಟ ಅಂತರ ರಾಜ್ಯ ನೀರಾವರಿ ವಿವಾದಗಳು, ರಾಜ್ಯ ಎದುರಿಸುತ್ತಿರುವ ಜಲ ಸಂಕಷ್ಟ, ರಾಜ್ಯದ ನೀರಾವರಿ ಯೋಜನೆಗಳಿಗೆ ತ್ವರಿತ ಅನುಮೋದನೆ ಮತ್ತು ಅಗತ್ಯ ಅನುದಾನ ನೀಡುವ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.
ಮಾಜಿ ಪ್ರಧಾನಿಗಳ ಬೇಡಿಕೆಗಳ ಬಗ್ಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ ಜಲಶಕ್ತಿ ಸಚಿವರು, ಈ ಬಗ್ಗೆ ತಾವೇ ಖುದ್ದು ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಅಲ್ಲದೆ, ರಾಜ್ಯದ ಜಲ ವಿವಾದಗಳ ಬಗ್ಗೆ ಸಚಿವರು ಮಾಜಿ ಪ್ರಧಾನಿಗಳಿಂದ ಸಾಕಷ್ಟು ಮಾಹಿತಿ ಪಡೆದುಕೊಂಡರು. ಗೋದಾವರಿ, ಕೃಷ್ಣಾ, ಕಾವೇರಿ ನದಿಗಳ ಜೋಡಣೆಯ ಯೋಜನೆಯಲ್ಲಿ ರಾಜ್ಯಕ್ಕೆ 25 ಟಿಎಂಸಿ ಅಡಿಯಷ್ಟು ನೀರು ಹಂಚಿಕೆ ಮಾಡಬೇಕು ಎಂದು ದೇವೇಗೌಡರ ಮನವಿಗೂ ಸಕಾರಾತ್ಮಕವಾಗಿ ಸ್ಪಂದಿಸಿದರು.