ನವದೆಹಲಿ: ಸತತ ಮಳೆಯಿಂದ ತತ್ತರಿಸುತ್ತಿರುವ ಜನರು ಡಿಸಿಎಂ ಡಿಕೆ ಶಿವಕುಮಾರ್ ಅವರ ಬ್ರ್ಯಾಂಡೆಡ್ ನರಕದಲ್ಲಿ ನರಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜನ ಸತ್ತು ಬದುಕುತ್ತಿದ್ದರೆ. ಬೆಂಗಳೂರು ಜನ ಬ್ರ್ಯಾಂಡೆಡ್ ನರಕದಲ್ಲಿದ್ದಾರೆ! ನಗರ ನರಳುತ್ತಿದ್ದರೆ ಇವರಿಗೆ ಪ್ರಚಾರದ ಗೀಳು ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರಕಾರದ ಸಾಧನೆ ಬೆಂಗಳೂರು ರಸ್ತೆಗಳಲ್ಲಿ, ಚರಂಡಿಗಳಲ್ಲಿ ಕೊಚ್ಚೆಯಾಗಿ ಕೊಚ್ಚಿ ಹೋಗುತ್ತಿದೆ. ಇವರಿಗೆ ಆತ್ಮಸಾಕ್ಷಿ ಎನ್ನುವುದು ಇದೆಯಾ? ಸತ್ತ ಸರಕಾರಕ್ಕೆ ಸಾಧನೆ ಸಮಾವೇಶ ಬೇರೆ ಕೇಡು. ಡಿಸಿಎಂ ಡಿ.ಕೆ.ಶಿವಕುಮಾರ್ ಮಾತಿನ ಡಬ್ಬಾ ಹೊಡೆಯುವುದು ಬಿಟ್ಟು, ಪ್ರತಿಪಕ್ಷಗಳನ್ನು ನಿಂದಿಸುವುದನ್ನು ಪಕ್ಕಕ್ಕಿಟ್ಟು ಕೆಲಸ ಮಾಡಲಿ. ವಾರ್ ರೂಂನಲ್ಲಿ ಕೂತು ಜೆಡಿಎಸ್, ಬಿಜೆಪಿ ಮೇಲೆ ಪ್ರಾಕ್ಸಿವಾರ್ ಮಾಡಿದರೆ ಪ್ರಯೋಜನವೇನು ಎಂದು ಪ್ರಶ್ನಿಸಿದ ಅವರು, ಕೈಲಾಗದವನಿಗೆ ಬಾಯಿ ಭದ್ರ ಇರುವುದಿಲ್ಲ. ಈ ಮನುಷ್ಯ ಆ ಪರಿಸ್ಥಿತಿಯಲ್ಲಿದ್ದಾರೆ ಎಂದು ಕುಮಾರಸ್ವಾಮಿ ಅವರು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯಾವ ಪುರುಷಾರ್ಥಕ್ಕೆ ಗ್ರೇಟರ್ ಬೆಂಗಳೂರು? ಯಾರ ಉದ್ಧಾರಕ್ಕೆ ಬ್ರ್ಯಾಂಡ್ ಬೆಂಗಳೂರು? ಲೂಟಿ ಹೊಡೆಯೋದಕ್ಕೆ ಹೊಸ ಹೊಸ ಹೆಸರೇ?! ಎರಡು ವರ್ಷಗಳಿಂದ ಬ್ರ್ಯಾಂಡ್.. ಬ್ರ್ಯಾಂಡ್.. ಎಂದು ಭಜನೆ ಮಾಡುತ್ತಿದ್ದೀರಲ್ಲ.. ಬ್ರ್ಯಾಂಡ್ ಎಂದರೆ ಬೆಂಗಳೂರನ್ನು ಮುಳುಗಿಸುವುದಾ? ಎಂದು ಪ್ರಶ್ನಿಸಿದ್ದಾರೆ.





