ನವದೆಹಲಿ: ಅಸೋಜ್ ಅಮಾವಾಸ್ಯೆ ಹಬ್ಬ ಆಚರಿಸುವ ಬಿಷ್ಣೋಯ್ ಸಮುದಾಯದ ದೀರ್ಘಕಾಲದ ಸಂಪ್ರದಾಯವನ್ನು ಪರಿಗಣಿಸಿ ಭಾರತೀಯ ಚುನಾವಣಾ ಆಯೋಗವು ಹರಿಯಾಣ ವಿಧಾನಸಭಾ ಚುನಾವಣೆಗಳ ದಿನಾಂಕದಲ್ಲಿ ಬದಲಾವಣೆ ಘೋಷಿಸಿದೆ.
ಮುಂದಿನ ಅಕ್ಟೋಬರ್.1ರಂದು ನಡೆಯಬೇಕಿದ್ದ ಹರಿಯಾಣ ವಿಧಾನಸಭಾ ಚುನಾವಣಾ ದಿನಾಂಕವನ್ನು ಅಕ್ಟೋಬರ್.5ಕ್ಕೆ ನಿಗದಿಪಡಿಸಿದೆ. ಇನ್ನು ಜಮ್ಮು-ಕಾಶ್ಮೀರ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ದಿನಾಂಕವನ್ನು ಅಕ್ಟೋಬರ್ 4ರ ಬದಲಿಗೆ ಅಕ್ಟೋಬರ್ 8ಕ್ಕೆ ಪರಿಷ್ಕರಿಸಿದೆ.
ಈ ಮೂಲಕ ಚುನಾವಣಾ ಆಯೋಗವು ಗುರು ಜಾಂಬೇಶ್ವರನ ಸ್ಮರಣಾರ್ಥ ಅಸೋಜ್ ಅಮಾವಾಸ್ಯೆ ಹಬ್ಬ ಆಚರಿಸುವ ಬಿಷ್ಣೋಯ್ ಸಮುದಾಯದ ದೀರ್ಘಕಾಲದ ಸಂಪ್ರದಾಯವನ್ನು ಎತ್ತಿ ಹಿಡಿದಿದೆ.
ಇದು ಶತಮಾನಗಳ ಸಂಪ್ರದಾಯ ಹಬ್ಬವಾಗಿರುವುದರಿಂದ ಜನತೆ ಮತದಾನವನ್ನು ಕೂಡ ನಿರಾಕರಿಸಲು ಮುಂದಾಗಿದ್ದಾರೆ. ಇದರಿಂದ ಮತದಾರರ ಭಾಗವಹಿಸುವಿಕೆಯನ್ನು ಕಡಿಮೆ ಮಾಡಬಹುದು. ಹಾಗಾಗಿ ಸಮುದಾಯಗಳ ಭಾವನೆ ಗೌರವಿಸುವ ಉದ್ದೇಶದಿಂದ ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಬದಲಾವಣೆ ಮಾಡಿದೆ.