ಜೆರುಸಲೆಂ: ಮುಸ್ಲಿಂಮರ ಪವಿತ್ರ ಹಜ್ ಯಾತ್ರೆ ವೇಳೆ ಭಾರೀ ದುರಂತ ನಡೆದಿದ್ದು, ಅಧಿಕ ತಾಪಮಾನದಿಂದ 645 ಮಂದಿ ಸಾವನ್ನಪ್ಪಿದ್ದಾರೆ.
ಹಜ್ ಯಾತ್ರೆ ವೇಳೆ ಮೆಕ್ಕಾದಲ್ಲಿ ದಾಖಲಾದ 51.8 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ 645 ಮಂದಿ ಮೃತಪಟ್ಟಿದ್ದು, ಈ ಪೈಕಿ 90 ಮಂದಿ ಭಾರತೀಯರಿದ್ದಾರೆ. ಇದರಲ್ಲಿ ಬೆಂಗಳೂರಿನ ಇಬ್ಬರು ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮೃತರಿಬ್ಬರು ಬಕ್ರೀದ್ ಹಬ್ಬದ ಹಿನ್ನೆಲೆ ಹಜ್ ಯಾತ್ರೆಗೆ ತೆರಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಮೆಕ್ಕಾದ ಮೀನಾ ಎಂಬ ನಗರದಲ್ಲಿ ಇಬ್ಬರು ಬೆಂಗಳೂರಿನ ಯಾತ್ರಿಗಳು ಸಾವನ್ನಪ್ಪಿದ್ದಾರೆ. ಮೃತರನ್ನು ರುಕ್ಸಾನ ಹಾಗೂ ಮೊಹಮ್ಮದ್ ಇಲಿಯಾಸ್ ಎಂದು ಗುರುತಿಸಲಾಗಿದೆ. ಇನ್ನು ಈ ಬಾರಿ ಕರ್ನಾಟಕದಿಂದ 10,300 ಮಂದಿ ಹಜ್ ಯಾತ್ರೆಗೆ ತೆರಳಿದ್ದರು. ಇವರೊಂದಿಗೆ ರುಕ್ಸಾನ ಸಹ ತಮ್ಮ ಕುಟುಂಬದ ಜೊತೆಗೆ ಹಜ್ ಯಾತ್ರೆಗೆ ತೆರಳಿದ್ದರು.
ಈ ವೇಳೆ ಅಲ್ಲಿನ ತಾಪಮಾನ ಜಾಸ್ತಿಯಾಗಿರುವುದರಿಂದ ರುಕ್ಸಾನ ಸಾವನ್ನಪ್ಪಿದ್ದಾರೆ ಎಂದು ಹಜ್ ಕಮಿಟಿಯ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಜ್ ಖಾನ್ ಮಾಹಿತಿ ನೀಡಿದ್ದಾರೆ. ಮೆಕ್ಕಾದಲ್ಲಿ ದಿನದಿಂದ ದಿನಕ್ಕೆ ಉಷ್ಣಾಂಶ ಭಾರೀ ಏರಿಕೆಯಾಗುತ್ತಿದ್ದು, ಇದು ಹೀಗೆಯೇ ಮುಂದುವರಿದರೆ ಯಾತ್ರೆಗೆ ತೆರಳಿರುವ ಯಾತ್ರಿಗಳ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಕೂಲಂಕುಶವಾಗಿ ಮಾಹಿತಿ ಪಡೆಯುತ್ತಿರುವ ಕೇಂದ್ರ ಸರ್ಕಾರ ಭಾರತೀಯ ಯಾತ್ರಿಗಳನ್ನು ರಕ್ಷಣೆ ಮಾಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದು, ಭಾರತೀಯ ಯಾತ್ರಿಗಳ ರಕ್ಷಣೆಗೆ ಸದಾ ಸಿದ್ಧ ಎಂದು ಮಾಹಿತಿ ನೀಡಿದೆ.