ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಮಂಡಳಿಯು ತನ್ನ 56ನೇ ಸಭೆಯನ್ನು ಸೆ.3 ಮತ್ತು 4ರಂದು ನವದೆಹಲಿಯಲ್ಲಿ ನಡೆಸಲಿದೆ.
ಸದಸ್ಯರಿಗೆ ಕಳುಹಿಸಲಾದ ನೋಟಿಸ್‍ನ ಪ್ರಕಾರ, ಎರಡೂ ದಿನಗಳಲ್ಲಿ ಬೆಳಿಗ್ಗೆ 11 ಗಂಟೆಗೆ ಕಾರ್ಯಕಲಾಪಗಳು ಪ್ರಾರಂಭವಾಗುತ್ತವೆ. ಮೋದಿಯ ದೀಪಾವಳಿ ಗಿಫ್ಟ್ ಘೋಷಣೆಯ ಬಗ್ಗೆ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
ಹೆಚ್ಚುವರಿಯಾಗಿ, ಸೆಪ್ಟೆಂಬರ್.2ರಂದು ರಾಜಧಾನಿಯಲ್ಲಿ ಅಧಿಕಾರಿಗಳ ಸಭೆ ನಡೆಯಲಿದೆ. ಅಧಿವೇಶನಗಳ ಕಾರ್ಯಸೂಚಿ, ಸ್ಥಳದ ವಿವರಗಳೊಂದಿಗೆ, ನಂತರದ ದಿನಾಂಕದಲ್ಲಿ ಭಾಗವಹಿಸುವವರಿಗೆ ಹಂಚಿಕೊಳ್ಳಲಾಗುವುದು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.
ದೀಪಾವಳಿ ವೇಳೆಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಸ್ವರೂಪದಲ್ಲಿ ವ್ಯಾಪಕ ಬದಲಾವಣೆ ಮಾಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.
ಬದಲಾಗುವ ಪ್ರಸ್ತಾವನೆಗಳಲ್ಲಿ ಸಣ್ಣ ಕಾರುಗಳ ಮೇಲೆ ತೆರಿಗೆಯನ್ನು ಕಡಿತಗೊಳಿಸುವುದೂ ಸೇರಿದೆ. ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮೇಲೆ ಈಗ ಇರುವ ಶೇ.28ರಷ್ಟು ಜಿಎಸ್‍ಟಿಯನ್ನು ಶೇ.18ಕ್ಕೆ ಇಳಿಸಲು ಸರಕಾರ ಸೂಚಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.





