ಹೊಸದಿಲ್ಲಿ : ಇದೇ ಮೊದಲ ಬಾರಿಗೆ, ರಿಟರ್ನ್ ಪ್ರಯಾಣ ಟಿಕೆಟ್‌ಗಳನ್ನು ಬುಕ್ ಮಾಡುವ ಪ್ರಯಾಣಿಕರಿಗೆ ಶೇ. 20 ರಷ್ಟು ರಿಯಾಯಿತಿ ನೀಡುವ ರೈಲ್ವೆ ಸಚಿವಾಲಯ ಪ್ರಯಾಣಿಕರಿಗೆ ರೌಂಡ್-ಟ್ರಿಪ್ ಪ್ಯಾಕೇಜ್ ಘೋಷಿಸಿದೆ.
ಫ್ಲೆಕ್ಸಿ-ಫೇರ್ ವ್ಯವಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸುವ ರಾಜಧಾನಿ, ಡುರೊಂಟೊ ಮತ್ತು ಶತಾಬ್ದಿ ರೈಲುಗಳನ್ನು ಹೊರತುಪಡಿಸಿ, ಇತರ ಎಲ್ಲಾ ಕಾಯ್ದಿರಿಸಿದ ರೈಲುಗಳಲ್ಲಿ ಹೋಗಿ ಬರುವ ಎರಡೂ ಟಿಕೆಟ್ ಒಟ್ಟಿ ಬುಕ್ ಮಾಡಿದರೆ ಟಿಕೆಟ್ ದರದಲ್ಲಿ ಶೇ. 20 ರಷ್ಟು ರಿಯಾಯಿತಿ ಲಭ್ಯವಿದೆ.
ಈ ಯೋಜನೆ ಅಡಿ ಬುಕಿಂಗ್ ಆಗಸ್ಟ್ 14 ರಿಂದ ಬುಕಿಂಗ್ ಪ್ರಾರಂಭವಾಗಲಿದೆ. ಆದರೆ ಯೋಜನೆ ಅಡಿ ಬುಕ್ ಮಾಡಿದ ಟಿಕೆಟ್‌ಗಳಿಗೆ ಶುಲ್ಕ ಮರುಪಾವತಿಯನ್ನು ಅನುಮತಿಸಲಾಗುವುದಿಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಜನದಟ್ಟಣೆಯನ್ನು ತಪ್ಪಿಸಲು, ತೊಂದರೆ-ಮುಕ್ತ ಬುಕಿಂಗ್ ಅನ್ನು ಖಚಿತಪಡಿಸಿಕೊಳ್ಳಲು, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು, ಹಬ್ಬದ ಋತುವಿನಲ್ಲಿ ಗರಿಷ್ಠ ದಟ್ಟಣೆಯನ್ನು ಮರುಹಂಚಿಕೆ ಮಾಡಲು ಮತ್ತು ವಿಶೇಷ ರೈಲುಗಳು ಸೇರಿದಂತೆ ರೈಲುಗಳ ಎರಡೂ ಮಾರ್ಗಗಳ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆಯನ್ನು ರೂಪಿಸಲಾಗಿದೆ. ರೌಂಡ್-ಟ್ರಿಪ್ ಪ್ಯಾಕೇಜ್ ಎಂದು ಹೆಸರಿಸಲಾದ ಈ ಯೋಜನೆಯು ಅಕ್ಟೋಬರ್ 13 ರಿಂದ ಅಕ್ಟೋಬರ್ 26 ರವರೆಗಿನ ಪ್ರಯಾಣಕ್ಕಾಗಿ ಬುಕ್ ಮಾಡಿದ ಟಿಕೆಟ್‌ಗಳಿಗೆ ಶೇ. 20 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅದೇ ರೈಲಿನಲ್ಲಿ ನವೆಂಬರ್ 17 ರಿಂದ ಡಿಸೆಂಬರ್ 1 ರವರೆಗೆ ಹಿಂದಿರುಗುವ ಪ್ರಯಾಣಕ್ಕೆ ಮಾತ್ರ ಅನ್ವಯವಾಗುತ್ತದೆ. ಆಗಸ್ಟ್ 14 ರಿಂದ ಬುಕ್ ಮಾಡಿದ ಟಿಕೆಟ್‌ಗಳಿಗೆ ಮಾತ್ರ ರಿಯಾಯಿತಿ ಅನ್ವಯಿಸುತ್ತದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.





